- ಲಂಕಾ ಜಲಸೀಮೆ ಪ್ರವೇಶಿಸಲು ಅನುಮತಿ ಕೋರಿಕೆ
ಕೊಲಂಬೊ: ಶ್ರೀಲಂಕಾ ಕರಾವಳಿ ಬಳಿ ಇರಾನ್‌ನ ಯುದ್ಧನೌಕೆಯನ್ನು ಅಮೆರಿಕ ತನ್ನ ಸಬ್‌ಮರೀನ್ ಬಳಸಿ ಹೊಡೆದುರುಳಿಸಿದ ಬೆನ್ನಲ್ಲೇ, ಮಾರ್ಗಮಧ್ಯೆ ಸಿಲುಕಿರುವ ಮತ್ತೊಂದು ಸಮರನೌಕೆಗೆ ಭೀತಿ ಶುರುವಾಗಿದೆ. ಹೀಗಾಗಿ ತುರ್ತು ಸಹಾಯಕ್ಕಾಗಿ ಶ್ರೀಲಂಕಾವನ್ನು ವಿನಂತಿಸಿದೆ.ಈ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿರುವ ಸಚಿವ ನಲಿಂದ ಜಯತಿಸ್ಸಾ, ‘ಇರಾನ್‌ನ ಮತ್ತೊಂದು ಯುದ್ಧನೌಕೆ ನಮ್ಮ ವಿಸ್ತೃತ ಆರ್ಥಿಕ ಪ್ರದೇಶದಲ್ಲಿ ಕಾಯುತ್ತಿದೆ. ಆದರದು ಪ್ರಾದೇಶಿಕ ಸಮುದ್ರದ ಹೊರಗಿದೆ. ಅದು ತುರ್ತು ಸಹಾಯಕ್ಕಾಗಿ ವಿನಂತಿಸಿದೆ. ಹಡಗಿನಲ್ಲಿರುವ ಎಲ್ಲಾ ಜೀವಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದಿದ್ದಾರೆ.
==ಹೋರ್ಮುಜ್ ಬಂದ್: ಕೊಲ್ಲೀಲಿ
23,000 ಭಾರತೀಯರು ಅತಂತ್ರ
ಕಚ್ಚಾತೈಲ, ಎಲ್‌ಎನ್‌ಜಿ ಹೊತ್ತ 36 ನೌಕೆ ಲಂಗರು
ನವದೆಹಲಿ: ಇರಾನ್ ಮುಚ್ಚಿರುವ ಹೋರ್ಮುಜ್ ಜಲಸಂಧಿಯನ್ನು ದಾಟಿದರೆ ದಾಳಿಗೆ ತುತ್ತಾಗುವ ಭೀತಿಯಿಂದ ಸುಮಾರು 23,000 ಭಾರತೀಯ ನಾವಿಕರು ತವರಿನತ್ತ ಬರಲಾರದೆ ಕೊಲ್ಲಿ ಪ್ರದೇಶದಲ್ಲೇ ಸಿಲುಕಿದ್ದು, ದಿಕ್ಕು ತೋಚದೆ ಅತಂತ್ರರಾಗಿದ್ದಾರೆ.
ಭಾರತದ ಧ್ವಜ ಹೊಂದಿರುವ 36 ಹಡಗುಗಳು ಕಚ್ಚಾತೈಲ, ವಾಣಿಜ್ಯ ಸರಕು, ಎಲ್‌ಎನ್‌ಜಿ ಹೊತ್ತು ಜಲಸಂಧಿ ದಾಟಲಾಗದೆ ಲಂಗರು ಹಾಕಿವೆ. ಇವುಗಳಲ್ಲಿ 7 ನೌಕೆಗಳು ಸರ್ಕಾರಿ ಒಡೆತನದ್ದು ಎನ್ನಲಾಗಿದೆ. ಇವುಗಳಲ್ಲಿರುವ ಸರಕಿನ ಮೌಲ್ಯ 10,000 ಕೋಟಿ ರು. ಎಂದು ವರದಿಯಾಗಿತ್ತು. ಇವುಗಳು ಆದಷ್ಟು ಬೇಗ ಭಾರತೀಯ ಮಾರುಕಟ್ಟೆ ತಲುಪದಿದ್ದರೆ ತೈಲ ಬೆಲೆ ಗಗನಕ್ಕೇರುವುದರಲ್ಲಿ ಸಂಶಯವಿಲ್ಲ.ತನ್ನ ಮೇಲೆ ದಾಳಿ ಮಾಡುತ್ತಿರುವ ದೇಶಗಳಿಗೆ ತೈಲ ಪೂರೈಕೆಯನ್ನು ತಡೆಯುವ ಉದ್ದೇಶದಿಂದ ಇರಾನ್‌ನ ರೆವಲ್ಯೂಷ್ನರಿ ಗಾರ್ಡ್, ಹೋರ್ಮುಜ್ ಜಲಸಂಧಿಯಲ್ಲಿ ಸಾಗುವ ನೌಕೆಗಳತ್ತ ಕ್ಷಿಪಣಿಗಳ ಮರೆಗರೆಯುವ ಎಚ್ಚರಿಕೆ ನೀಡಿದೆ. ಅದರಂತೆ ಈಗಾಗಲೇ ಹಲವು ಹಡಗುಗಳ ಮೇಲೆ ದಾಳಿ ನಡೆದಿದ್ದು, ಮೂವರು ಭಾರತೀಯರು ಮೃತಪಟ್ಟಿದ್ದಾರೆ.
==ಗಡಿಯಲ್ಲೇ ಇರಾನ್ ನೌಕೆ ಮುಳುಗಿದರೂ ಮೋದಿ ಮೌನ: ವಿಪಕ್ಷಗಳ ಟೀಕೆ
ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ: ರಾಹುಲ್
ರಾಷ್ಟ್ರೀಯ ಹಿತಾಸಕ್ತಿಯ ಅಜಾಗರೂಕ ತ್ಯಾಗ: ಖರ್ಗೆ
ನವದೆಹಲಿ: ಭಾರತೀಯ ಸೇನೆಯೊಂದಿಗಿನ ಸಮರಾಭ್ಯಾಸ ಮುಗಿಸಿ ಮರಳುತ್ತಿದ್ದ ಇರಾನ್‌ನ ಯುದ್ಧನೌಕೆ ಡೆನಾ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ದಾಳಿಗೆ ತುತ್ತಾಗಿ ಮುಳುಗಡೆಯಾದ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ವಿಪಕ್ಷಗಳು ಪ್ರಶ್ನಿಸಿವೆ. ‘ಮಧ್ಯಪ್ರಾಚ್ಯ ಯುದ್ಧವು ನಮ್ಮ ಹಿತ್ತಲನ್ನು ತಲುಪಿರುವ ಹೊತ್ತಿನಲ್ಲಿ ದೇಶವನ್ನು ಮುನ್ನಡೆಸಲು ಸ್ಥಿರ ಕೈಗಳ ಅಗತ್ಯವಿದೆ. ಆದರೆ ನಮ್ಮ ಪ್ರಧಾನಿ (ಅಮೆರಿಕ ಮತ್ತು ಇಸ್ರೇಲ್ ಜತೆ) ರಾಜಿ ಮಾಡಿಕೊಂಡವರಾಗಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ‘ನರೇಂದ್ರ ಮೋದಿ ಸರ್ಕಾರವು ಭಾರತದ ಕಾರ್ಯತಂತ್ರ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಅಜಾಗರೂಕವಾಗಿ ತ್ಯಾಗ ಮಾಡಿರುವುದನ್ನು ಇಲ್ಲಿ ಕಾಣಬಹುದು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನ್ಯಾಷನಲ್ ಕಾನ್ಫರೆನ್ಸ್ ಪಕ್ಷ, ಆಪ್ ಕೂಡ ಮೋದಿ ಸರ್ಕಾರದ ಮೌನವನ್ನು ಟೀಕಿಸಿವೆ.‘ಭಾರತ ಇರಾನ್ ಜತೆ ನಿಲ್ಲಲಿ ಎಂಬುದು ಕಾಂಗ್ರೆಸ್‌ನ ಬಯಕೆಯಾಗಿದೆ’ ಎಂದಿರುವ ಬಿಜೆಪಿ, ‘ವಿದೇಶಾಂಗ ನೀತಿಯು ದೇಶದ ಹಿತಾಸಕ್ತಿ ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ಕೊಡಬೇಕೇ ಹೊರತು ವಿಪಕ್ಷಗಳ ಒತ್ತಾಯಕ್ಕಲ್ಲ’ ಎಂದು ತಿರುಗೇಟು ನೀಡಿದೆ.‘ಭಾರತ ಇರಾನ್ ಜತೆ ನಿಲ್ಲಲಿ ಎಂಬುದು ಕಾಂಗ್ರೆಸ್‌ನ ಬಯಕೆಯಾಗಿದೆ’ ಎಂದಿರುವ ಬಿಜೆಪಿ, ‘ವಿದೇಶಾಂಗ ನೀತಿಯು ದೇಶದ ಹಿತಾಸಕ್ತಿ ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ಕೊಡಬೇಕೇ ಹೊರತು ವಿಪಕ್ಷಗಳ ಒತ್ತಾಯಕ್ಕಲ್ಲ’ ಎಂದು ತಿರುಗೇಟು ನೀಡಿದೆ.
==ಇರಾನ್‌ಗೀಗ ಕುರ್ದಿಶ್ ದಾಳಿ ಆತಂಕ
ಇರಾನ್ ವಿರುದ್ಧ ಹೋರಾಟದ ಘೋಷಣೆ । ಇರಾಕ್‌ನ ಕುರ್ದಿಶ್ ಮೇಲೆ ಇರಾನ್ ದಾಳಿಇಬ್ರಿಲ್ (ಇರಾಕ್): ಅಮೆರಿಕ ಮತ್ತು ಇಸ್ರೇಲ್‌ನಿಂದ ಬಾಹ್ಯ ದಾಳಿ ಎದುರಿಸುತ್ತಿರುವ ಇರಾನ್‌ಗೆ ಇದೀಗ ಆಂತರಿಕವಾಗಿ ಕುರ್ದಿಶ್ ಬಂಡುಕೋರರ ದಂಗೆಯ ಭೀತಿ ಎದುರಾಗಿದೆ. ಖುರ್ದಿಶ್ ಹೋರಾಟಗಾರರ ಜೊತೆ ಅಮೆರಿಕ ಮಾತುಕತೆ ನಡೆಸಿದ ಬೆನ್ನಲ್ಲೇ, ಇರಾನ್ ವಿರುದ್ಧ ಹೋರಾಟಕ್ಕೆ ನಾವು ರೆಡಿ ಎಂದು ಬಂಡುಕೋರರು ಹೇಳಿದ್ದಾರೆ.
ಕುರ್ದಿಶ್ ಗುಂಪುಗಳು ವ್ಯವಸ್ಥಿತ, ಸಾವಿರಾರು ತರಬೇತಿ ಪಡೆದ ಹೋರಾಟಗಾರರ ಹೊಂದಿರುವ ಇರಾನ್ ಸರ್ಕಾರದ ವಿರೋಧಿ ಗುಂಪಾಗಿದೆ. ಇವರು ಯುದ್ಧಕ್ಕೆ ಪ್ರವೇಶಿಸಿದರೆ ಇರಾನ್‌ಗೆ ಭಾರೀ ಹೊಡೆತ ಬೀಳುವ ನಿರೀಕ್ಷೆ ಇದೆ. ಈಗಾಗಲೇ ಸಾಕಷ್ಟು ಕುರ್ದಿಶ್ ಸೈನಿಕರನ್ನು ಇರಾನ್ ಗಡಿಯ ಸುಲೈಮನಿಯಾ ಪ್ರಾಂತ್ಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ಉತ್ತರ ಇರಾಕ್‌ನ ಅರೆಸ್ವಾಯತ್ತ ಕುರ್ದಿಶ್ ಪ್ರಾಂತ್ಯದ ಕುರ್ದಿಸ್ತಾನ್ ಫ್ರೀಡಂ ಪಾರ್ಟಿಯ ಅಧಿಕಾರಿ ಖಲೀಲ್ ನಾದಿರಿ ಹೇಳಿಕೊಂಡಿದ್ದಾರೆ.ಈ ನಡುವೆ ಕುರ್ದಿಶ್ ಹೋರಾಟ ಮಟ್ಟಹಾಕುವ ನಿಟ್ಟಿನಲ್ಲಿ ಇರಾಕ್‌ನ ಕುರ್ದಿಸ್ತಾನ್‌ನಲ್ಲಿರುವ ಕುರ್ದಿಶ್ ಗುಂಪುಗಳ ಮುಖ್ಯ ಕಚೇರಿಯನ್ನು ಗುರಿಯಾಗಿರಿಸಿ ಇರಾನ್ ಗುರುವಾರ ಕ್ಷಿಪಣಿ ದಾಳಿ ನಡೆಸಿದೆ. ಖರ್ದಿಶ್‌ಗಳು ಇರಾನ್ ಮತ್ತು ಇರಾಕ್ ಎರಡೂ ದೇಶಗಳ ಗಡಿಯಲ್ಲಿದ್ದಾರೆ.
ಖಮೇನಿ ಕಂಡರೆ ಆಗಲ್ಲ:ಕುರ್ದಿಶ್ ಜನಾಂಗದವರು ಹಿಂದಿನಿಂದಲೂ ಇರಾನ್‌ನ ಖಮೇನಿ ಆಡಳಿತವನ್ನು ವಿರೋಧಿಸುತ್ತಲೇ ಬಂದಿದ್ದಾರೆ. 1979ರ ಇಸ್ಲಾಮಿಕ್ ಕ್ರಾಂತಿಯ ಸಮಯದಲ್ಲಿ ಇರಾನ್ ಸೇನೆ ಹಲವು ಕುರ್ದಿಶ್ ನಗರ ಹಾಗೂ ಗ್ರಾಮಗಳನ್ನು ನಾಶ ಮಾಡಿತ್ತು. ಸಾವಿರಾರು ಮಂದಿ ಕುರ್ದಿಶ್‌ಗಳನ್ನು ಹತ್ಯೆ ಮಾಡಿತ್ತು.