72ನೇ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್‌ ಶನಿವಾರ ಸಂಜೆ 6.30ಕ್ಕೆ ಹೈದರಾಬಾದ್‌ ಹೈಟೆಕ್ಸ್ ಪ್ರದರ್ನನ ಕೇಂದ್ರದಲ್ಲಿ ನಡೆಯಲಿದೆ.

ಹೈದರಾಬಾದ್‌: 72ನೇ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್‌ ಶನಿವಾರ ಸಂಜೆ 6.30ಕ್ಕೆ ಹೈದರಾಬಾದ್‌ ಹೈಟೆಕ್ಸ್ ಪ್ರದರ್ನನ ಕೇಂದ್ರದಲ್ಲಿ ನಡೆಯಲಿದೆ.

ರಾಜಸ್ಥಾನ ಮೂಲದವರಾದ 2023ರ ಮಿಸ್‌ ಇಂಡಿಯಾ ನಂದಿನಿ ಗುಪ್ತಾ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಂತಿಮ ಸುತ್ತು ತಲುಪಿದ 24 ಸುಂದರಿಯರಲ್ಲಿ ಇವರೂ ಇದ್ದಾರೆ.

ಮೇ 11ರಂದು ಆರಂಭವಾದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಒಟ್ಟು 108 ಮಂದಿ ಸ್ಪರ್ಧಿಸಿದ್ದು, ವಿವಿಧ ಹಂತಗಳ ಬಳಿದ 24 ಜನ ಅಂತಿಮ ಹಂತಕ್ಕೆ ತಲುಪಿದ್ದಾರೆ. ಈ ಕಾರ್ಯಕ್ರಮವನ್ನು 2016ರ ಮಿಸ್‌ ವರ್ಲ್ಡ್‌ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ಮತ್ತು ಭಾರತೀಯ ಸಚಿನ್‌ ಕುಂಭಾರ್‌ ನಿರೂಪಿಸಲಿದ್ದಾರೆ. ಅಂತೆಯೇ, ಬಾಲಿವುಡ್‌ನ ಜಾಕ್ವೆಲಿನ್ ಫೆರ್ನಾಂಡಿಸ್‌ ಮತ್ತು ಇಶಾನ್‌ ಖಟ್ಟರ್‌ ಪ್ರದರ್ಶನ ನೀಡಲಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟ ಸೋನು ಸೂದ್‌ ಅವರಿಗೆ ಈ ಬಾರಿಯ ‘ವಿಶ್ವ ಸುಂದರಿ ಮಾನವೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು.

ಅಮೆರಿಕಕ್ಕೆ ಐಫೋನ್‌ ರಫ್ತು: ಚೀನಾ ಹಿಂದಿಕ್ಕಿದ ಭಾರತ 

ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಆ್ಯಪಲ್‌ ಐಫೋನ್‌ಗಳ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿ ಹೇಳಿದೆ.ಇತ್ತೀಚಿನ ಅಂದಾಜಿನ ಪ್ರಕಾರ ಏಪ್ರಿಲ್‌ನಲ್ಲಿ ಭಾರತದಲ್ಲಿ ತಯಾರಾದ 30 ಲಕ್ಷ ಐಫೋನ್‌ಗಳನ್ನು ಅಮೆರಿಕಕ್ಕೆ ರವಾನಿಸಲಾಗಿದೆ. 

ಇದಕ್ಕೆ ಹೋಲಿಸಿದರೆ, ಚೀನಾದಿಂದ ಫೋನ್ ರಫ್ತು ಶೇ. 76 ರಷ್ಟು ಕುಸಿದಿದ್ದು, ಕೇವಲ 9 ಲಕ್ಷ ಐಫೋನ್‌ ಮಾತ್ರ ರಫ್ತಾಗಿವೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದಲ್ಲಿ ತಯಾರಿಸದಿದ್ದರೆ ಆಮದು ಮಾಡಿಕೊಳ್ಳುವ ಐಫೋನ್‌ಗಳ ಮೇಲೆ 25% ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ ನಂತರ ಆ್ಯಪಲ್‌ ಭಾರಿ ಸವಾಲು ಎದುರಿಸುತ್ತಿದೆ, ಇದೇ ವೇಳೆ ಈ ಬೆಳವಣಿಗೆಗಳು ನಡೆದಿವೆ.

ಅಂಕಿತಾ ಕೊಲೆ ಪ್ರಕರಣ: ಬಿಜೆಪಿ ನಾಯಕನ ಮಗನಿಗೆ ಜೀವಾವಧಿ

ಡೆಹ್ರಾಡೂನ್‌: 2022ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ್ದ 19 ವರ್ಷದ ಹೋಟೆಲ್‌ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸ್ಥಳೀಯ ಕೋರ್ಟ್‌ ಶುಕ್ರವಾರ ಬಿಜೆಪಿ ಮಾಜಿ ನಾಯಕನ ಮಗ ಪುಳಕಿತ್ ಆರ್ಯ ಮತ್ತು ಇತರ ಇಬ್ಬರು ಆರೋಪಿಗಳಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಪೌಢಿ ಜಿಲ್ಲೆಯ ಯಮಕೇಶ್ವರ ಪ್ರದೇಶದ ತಮ್ಮ ಒಡೆತನದ ವನಂತರಾ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾಳನ್ನು ಇವರು ಕೊಂದಿದ್ದರು. ಶಿಕ್ಷೆಗೊಳಗಾದ ಮೂವರಿಗೂ ಕೋಟ್‌ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟು 50,000 ರು. ದಂಡ ವಿಧಿಸಿದೆ.

ಅಂಕಿತಾ ಸೆಪ್ಟೆಂಬರ್ 18, 2022 ರಂದು ಕಾಣೆಯಾಗಿದ್ದಳು. ಕೆಲವು ದಿನಗಳ ನಂತರ, ಆಕೆಯ ಶವವನ್ನು ಚಿಲ್ಲಾ ಕಾಲುವೆಯಿಂದ ಹೊರತೆಗೆಯಲಾಗಿತ್ತು. ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಳಿತ್ ಆರ್ಯ, ಅಂಕಿತಾಗೆ ರೆಸಾರ್ಟ್‌ನಲ್ಲಿ ಗ್ರಾಹಕರಿಗೆ ‘ವಿಶೇಷ ಸೇವೆ’ ನೀಡುವಂತೆ ಬೆದರಿಕೆ ಹಾಕುತ್ತಿದ್ದ. ಒಪ್ಪದೇ ಇದ್ದಾಗ ಕೊಲೆ ಮಾಡಿದ್ದ.

ಸ್ಪೆಲ್ಲಿಂಗ್‌ ಬಿ ಸ್ಪರ್ಧೆ: ಭಾರತೀಯ ಮೂಲದ ಫೈಜಾನ್ ಝಾಕಿಗೆ ಜಯ

ನ್ಯೂಯಾರ್ಕ್‌: ಇಲ್ಲಿ ನಡೆದ 100ನೇ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಮೂಲದ ಫೈಜಾನ್‌ ಝಾಕಿ(13) éclaircissement ಎಂಬ ಪದದ ಅಕ್ಷರಗಳನ್ನು ಸರಿಯಾಗಿ ಹೇಳಿ ವಿಜೇತರಾಗಿದ್ದಾರೆ. 2ನೇ ಸ್ಥಾನವನ್ನು ಭಾರತ ಮೂಲದವರೇ ಆದ ಸರ್ವಜ್ಞ ಕದಂ ಪಡೆದಿದ್ದಾರೆ. 

ಝಾಕಿ, 21ನೇ ಸುತ್ತಿನಲ್ಲಿ ‘ಅಸ್ಪಷ್ಟವಾದದ್ದನ್ನು ತೆರವುಗೊಳಿಸುವುದು ಅಥವಾ ಜ್ಞಾನೋದಯ’ ಎಂಬ ಅರ್ಥ ಬರುವ éclaircissement ಪದದಲ್ಲಿರುವ ಅಕ್ಷರಗಳನ್ನು ಸರಿಯಾಗಿ ಹೇಳಿ 8 ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. 42 ಲಕ್ಷ ರು. ನಗದು, ಪದಕ ಮತ್ತು ಟ್ರೋಫಿಯನ್ನು ಇವರು ಪಡೆಯಲಿದ್ದಾರೆ. 

ಜೊತೆಗೆ, ಬೀ ನಿಘಂಟು ಪಾಲುದಾರ ಮೆರಿಯಮ್‌ನಿಂದ 2 ಲಕ್ಷ ರು. ಉಡುಗೊರೆ ಮತ್ತು ಗ್ರಂಥಾಲಯದ ಸದಸ್ಯತ್ವ ಸಿಗಲಿದೆ.ಬಳಿಕ ಮಾತನಾಡಿದ ಝಾಕಿ, ‘ನನಗೆ ಈ ಅನುಭವವನ್ನು ವರ್ಣಿಸಲಾಗದು. ಈ ಗೆಲುವನ್ನು ನಾನು ನಿರೀಕ್ಷೆ ಮಾಡಿರಲೇ ಇಲ್ಲ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.