ಸಾರಾಂಶ
ರಾಜ್ಯದ ಸ್ವಾಯತ್ತೆ ರಕ್ಷಿಸಲು ಸಮಿತಿ ರಚನೆ: ಸಿಎಂ ಘೋಷಣೆಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ
==ಚೆನ್ನೈ: ಹಿಂದಿ ಹೇರಿಕೆ, ಅನುದಾನ ಹಂಚಿಕೆ ಸೇರಿ ವಿವಿಧ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಶಕಗಳಿಂದಲೂ ನೇರ ಸಂಘರ್ಷ ನಡೆಸುತ್ತಿರುವ ತಮಿಳುನಾಡಿನ ಡಿಎಂಕೆ ಸರ್ಕಾರ ಇದೀಗ ಮತ್ತೊಂದು ಐತಿಹಾಸಿಕ ನಿರ್ಧಾರದ ಮೂಲಕ ದೊಡ್ಡಮಟ್ಟದಲ್ಲಿ ಕೇಂದ್ರದ ವಿರುದ್ಧ ‘ಸ್ವಾತಂತ್ರ್ಯ ಸಮರ’ ಘೋಷಿಸಿದೆ.
ರಾಜ್ಯದ ಸ್ವಾಯತ್ತೆ ಕಾಪಾಡುವ ನಿಟ್ಟಿನಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಗಳೇನು? ರಾಜ್ಯದ ಯಾವ ಹಕ್ಕುಗಳನ್ನು ಕಸಿಯಲಾಗಿದೆ ಎಂಬುದರ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ಆದೇಶ ಹೊರಡಿಸಿದೆ.ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ- ಎಐಡಿಎಂಕೆ ಮೈತ್ರಿ ಮಾಡಿಕೊಂಡು ಡಿಎಂಕೆಗೆ ಸವಾಲೆಸೆಯಲು ಸಜ್ಜಾಗಿವೆ. ಅಂಥ ಹೊತ್ತಿನಲ್ಲೇ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ.
ಸಮಿತಿ ಏಕೆ?:ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರ ಕಸಿಯುತ್ತಿದೆ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಅಧಿಕಾರ ಹೆಚ್ಚಾಗುತ್ತಿದ್ದು ಹಂತಹಂತವಾಗಿ ರಾಜ್ಯಗಳ ಅಧಿಕಾರ ಮೊಟಕಾಗುತ್ತಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮಾತ್ರವಲ್ಲದೇ, ದೇಶದ ಎಲ್ಲಾ ರಾಜ್ಯಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ , ರಾಜ್ಯಗಳ ಕಾನೂನುಬದ್ಧ ಅಧಿಕಾರ ರಕ್ಷಿಸುವ ನಿಟ್ಟಿನಲ್ಲಿ, ಒಕ್ಕೂಟ ವ್ಯವಸ್ಥೆಯ ರಚನೆಯ ಕಾಪಾಡುವ ನಿಟ್ಟಿನಲ್ಲಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಸುಧಾರಣೆಗಾಗಿ ಈ ಸಮಿತಿ ರಚಿಸಲಾಗಿದೆ ಎಂಬುದು ತಮಿಳುನಾಡು ಸರ್ಕಾರದ ವಾದ.
ಸಮಿತಿಯಲ್ಲಿ ಯಾರು?:ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೋಸೆಫ್ ಕುರಿಯನ್ ನೇತೃತ್ವದ ಸಮಿತಿಯಲ್ಲಿ ನಿವೃತ್ತ ಅಧಿಕಾರಿ ಅಶೋಕ್ ವರ್ಧನ್ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಎಂ.ನಾಗನಾಥನ್ ಸದಸ್ಯರಾಗಿದ್ದಾರೆ. ಈ ಸಮಿತಿ 2026ರ ಜನವರಿಯಲ್ಲಿ ಮಧ್ಯಂತರ ವರದಿ ಮತ್ತು 2028ರಲ್ಲಿ ಅಂತಿಮ ವರದಿಯನ್ನು ತನ್ನ ಶಿಫಾರಸುಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.
ಸಮಿತಿ ಕೆಲಸ ಏನು?:ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಗಳೇನು? ರಾಜ್ಯ ಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಯಾವ ವಿಷಯಗಳನ್ನು ವರ್ಗಾಯಿಸಲಾಗಿದೆ? ಒಕ್ಕೂಟ ವ್ಯವಸ್ಥೆ, ಕಾನೂನು ಮತ್ತು ನೀತಿಗಳನ್ನು ಬಲಪಡಿಸುವುದು ಹೇಗೆ? ರಾಜ್ಯದ ಅಧಿಕಾರ ಮೊಟಕುಗೊಳಿಸಿದಾಗ ಅದನ್ನು ಸಾಂವಿಧಾನಿಕವಾಗಿ ಎದುರಿಸುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಸಮಿತಿ ಅಧ್ಯಯನ ನಡೆಸಿ ಶಿಫಾರಸುಗಳೊಂದಿಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.
ಸ್ಟಾಲಿನ್ ಹೇಳಿದ್ದೇನು?:ಸಂವಿಧಾನದ ಅನ್ವಯ ಕೇಂದ್ರ ಮತ್ತು ರಾಜ್ಯಗಳನ್ನು ರಚಿಸಲಾಗಿದೆ. ಇವುಗಳ ಪೈಕಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದು ಸ್ವತಃ ಡಾ. ಅಂಬೇಡ್ಕರ್ ಅವರೇ ಸ್ಪಷ್ಟಪಡಿಸಿದ್ದರು. ಆದರೂ ಕೇಂದ್ರ ಸರ್ಕಾರಗಳು ಹಂತಹಂತವಾಗಿ ರಾಜ್ಯಗಳ ಅಧಿಕಾರ ಕಸಿಯುವ ಮೂಲಕ ಸಂವಿಧಾನದ ಸಮತೋಲನಕ್ಕೆ ಧಕ್ಕೆ ತಂದಿವೆ. ರಾಜ್ಯಗಳನ್ನು ದುರ್ಬಲಗೊಳಿಸಿ ಸಶಕ್ತ ಕೇಂದ್ರ ಸರ್ಕಾರ ನಿರ್ಮಿಸಲಾಗದು. ಬದಲಾಗಿ ಸಶಕ್ತ ರಾಜ್ಯಗಳನ್ನು ಸೃಷ್ಟಿಸುವ ಮೂಲಕ ಸದೃಢ ಕೇಂದ್ರ ಸರ್ಕಾರ ರಚಿಸಬಹುದು. ಹೀಗಾಗಿಯೇ ಈ ಸಮಿತಿ ರಚಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.ಕರುಣಾನಿಧಿ ಸವಾಲ್:
ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿಗಳಾದ ಸಿ.ಎನ್.ಅಣ್ಣಾದೊರೈ ಮತ್ತು ಎಂ.ಕರುಣಾನಿಧಿ ಅವರು ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಅಧ್ಯಯನಕ್ಕಾಗಿ ರಾಜಮನ್ನಾರ್ ಸಮಿತಿ ರಚಿಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಸಕಾರಿಯಾ ಮತ್ತು ಪುಂಚಿ ಆಯೋಗ ರಚನೆಗೂ ಮೊದಲೇ ಈ ಸಮಿತಿ ರಚಿಸಲಾಗಿತ್ತು. ಇದಾಗಿ 51 ವರ್ಷಗಳಾಗಿವೆ. ತಮಿಳುನಾಡು ವಿಧಾನಸಭೆಯಲ್ಲಿ ಸ್ವಾಯತ್ತೆಗೆ ಸಂಬಂಧಿಸಿ ಪ್ರಮುಖ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿತ್ತು. ಆದರೆ, ಅವು ಇನ್ನೂ ಅನುಷ್ಠಾನ ಆಗಿಲ್ಲ. ಇದೀಗ ತಮಿಳುನಾಡು ಈ ವಿಚಾರದಲ್ಲಿ ಮತ್ತೆ ಮುಂದಾಳತ್ವ ವಹಿಸಲಿದೆ ಎಂದು ಸ್ಟಾಲಿನ್ ಹೇಳಿದರು.