ಸಾರಾಂಶ
ನವದೆಹಲಿ: ಆನ್‌ಲೈನ್ ಎನ್‌ಸೈಕ್ಲೋಪೀಡಿಯಾ ಎಂದೇ ಖ್ಯಾತಿ ಪಡೆದಿರುವ ವಿಕಿಪೀಡಿಯಾದಲ್ಲಿನ ಮುಕ್ತ ಎಡಿಟಿಂಗ್ ಆಯ್ಕೆ ಅಪಾಯಕಾರಿ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಎಎನ್‌ಐ ನ್ಯೂಸ್ ಏಜೆನ್ಸಿಯ ವಿಕಿಪೀಡಿಯಾ ಪೇಜ್‌ನಲ್ಲಿ ಆ ನ್ಯೂಸ್ ಏಜೆನ್ಸಿಯನ್ನು ‘ಕೇಂದ್ರ ಸರ್ಕಾರದ ಪ್ರಚಾರದ ಅಸ್ತ್ರ’ ಎಂದು ಕರೆದು ಕೆಲವರು ಎಡಿಟ್ ಮಾಡಿದ್ದರು. ಅದರ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ. ಶುಕ್ರವಾರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರು, ‘ಯಾರು ಬೇಕಾದರೂ ವಿಕಿಪೀಡಿಯಾ ಪೇಜ್ ತಿದ್ದಬಹುದೇ? ಎಲ್ಲರಿಗೂ ಕೈಯಾಡಿಸಲು ಮುಕ್ತವಾಗಿರುವುದಾದರೆ ಅದೆಂತಹ ಪೇಜ್’ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಅದಕ್ಕೆ ವಿವರಣೆ ನೀಡಿದ ವಿಕಿಪೀಡಿಯಾ ಪರ ವಕೀಲರು, ‘ವಿಕಿಪೀಡಿಯಾ ಪೇಜ್ ಸೃಷ್ಟಿ ಮಾಡುವವರು ಹಾಗೂ ಎಡಿಟ್ ಮಾಡುವವರು ಕಾನೂನಿಗೆ ಬದ್ಧರಾಗಿರಬೇಕಾಗುತ್ತದೆ. ತಾವು ಬರೆಯುವ ಎಲ್ಲಾ ಮಾಹಿತಿಗೂ ದಾಖಲೆ ಹಾಗೂ ಮೂಲವನ್ನು ಒದಗಿಸಬೇಕಾಗುತ್ತದೆ. ಇದು ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾ ಪೇಜ್ ಅಲ್ಲ’ ಎಂದರು. ಆಗ ವಿಚಾರಣೆಯನ್ನು ಕೋರ್ಟ್ ಅ.28ಕ್ಕೆ ಮುಂದೂಡಿತು.
ಎಎನ್‌ಐ ನ್ಯೂಸ್ ಏಜೆನ್ಸಿಯನ್ನು ‘ಕೇಂದ್ರ ಸರ್ಕಾರದ ಪ್ರಚಾರ ಅಸ್ತ್ರ’ ಎಂದು ಎಡಿಟ್ ಮಾಡಿದ ಮೂವರ ಹೆಸರನ್ನು ಬಹಿರಂಗಪಡಿಸಬೇಕೆಂದು ಈ ಹಿಂದೆ ಹೈಕೋರ್ಟ್ ಹೇಳಿತ್ತು. ಅದರ ವಿರುದ್ಧ ವಿಕಿಪೀಡಿಯಾ ಮೇಲ್ಮನವಿ ಸಲ್ಲಿಸಿದೆ.