ಟೆಹ್ರಾನ್‌/ನವದೆಹಲಿ: ಭಾರತ, ರಷ್ಯಾ, ಪಾಕಿಸ್ತಾನ, ಚೀನಾ ಸೇರಿದಂತೆ 5 ಮಿತ್ರ ರಾಷ್ಟ್ರಗಳ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಿರುವುದಾಗಿ ಇರಾನ್‌ನ ವಿದೇಶಾಂಗ ಸಚಿವ ಸೈಯದ್‌ ಅಬ್ಬಾಸ್‌ ಅರಾಗ್ಚಿ ಅಧಿಕೃತವಾಗಿ ಘೋಷಿಸಿದ್ದಾರೆ.

ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ಬಂದ್‌ ಮಾಡಿದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಗ್ಯಾಸ್‌ ದರ ಏರಿಕೆಯಾಗಿತ್ತು. ಈ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸದಿದ್ದರೆ ಇರಾನ್‌ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿತ್ತು.

ಇದರ ನಡುವೆಯೇ, ‘ನಾವು ಸ್ನೇಹಿತರೆಂದು ಭಾವಿಸಿರುವ ಭಾರತ, ಚೀನಾ, ರಷ್ಯಾ, ಇರಾಕ್‌ ಮತ್ತು ಪಾಕಿಸ್ತಾನದ ವಾಣಿಜ್ಯ ಹಡಗುಗಳಿಗೆ ಹೊರ್ಮುಜ್‌ ಜಲಸಂಧಿ ಮೂಲಕ ಸಾಗಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಅರಾಗ್ಚಿ ಅವರು ಇರಾನ್‌ನ ಸರ್ಕಾರಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ವಿರೋಧಿಗಳಿಗೆ ಮುಕ್ತವಿಲ್ಲ:

‘ಆದರೆ, ಇರಾನ್‌ ವಿರೋಧಿಗಳಿಗೆ ಈ ಜಲಸಂಧಿಯನ್ನು ಮುಕ್ತಗೊಳಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ನಾವು ಯುದ್ಧದಲ್ಲಿದ್ದೇವೆ. ಈ ಪ್ರದೇಶವು ಯುದ್ಧದ ವ್ಯಾಪ್ತಿಯಲ್ಲಿದೆ. ಹೀಗಾಗಿ ನಮ್ಮ ಶತ್ರುಗಳು ಹಾಗೂ ಅವರ ಮಿತ್ರರ ಹಡಗುಗಳಿಗೆ ಹೊರ್ಮುಜ್‌ ಜಲಸಂಧಿ ಮೂಲಕ ಸಾಗಲು ಅನುಮತಿ ನೀಡುವುದಿಲ್ಲ. ಆದರೆ, ಉಳಿದವರಿಗೆ ಈ ಜಲಸಂಧಿ ಮುಕ್ತವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದ ಬಗ್ಗೆ ಏಕೆ ಇರಾನ್ ಉದಾರತೆ?

- ಮೊದಲೇ ಹಣದುಬ್ಬರಕ್ಕೆ ಸಿಲುಕಿದ್ದ ಇರಾನ್‌ನಲ್ಲಿ ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ

- ಅಕ್ಕಿ, ತರಕಾರಿ ಸೇರಿ ಹಲವು ಭಾರತೀಯ ಉತ್ಪನ್ನಗಳ ಮೇಲೆ ಇರಾನ್‌ ಅವಲಂಬಿತ

- ಅಕ್ಕಿ ಸೇರಿ 1.09 ಲಕ್ಷ ಕೋಟಿ ಮೌಲ್ಯದ ವಸ್ತು ಇನ್ನೂ ಭಾರತದಲ್ಲೇ ಉಳಿದುಕೊಂಡಿದೆ

- ಒಂದು ವೇಳೆ ಭಾರತಕ್ಕೆ ಹೋರ್ಮಜ್‌ ತೆರೆಯದಿದ್ದರೆ ಭಾರತದ ಉತ್ಪನ್ನಗಳು ರಫ್ತಾಗದು

- ಜೊತೆಗೆ ಭಾರತ ಜೊತೆಗೆ ಮೊದಲಿನಿಂದಲೂ ಇರಾನ್‌ ಉತ್ತಮ ಸಂಬಂಧ ಹೊಂದಿದೆ

- ಇರಾನ್‌ ನಾಯಕರ ಜತೆ ಪ್ರಧಾನಿ ಮೋದಿ, ಸಚಿವ ಜೈಶಂಕರ್‌ ಜೊತೆ ನಿಕಟ ಸಂಪರ್ಕ

 ಹೋರ್ಮುಜ್‌ ಮುಚ್ಚಿದ್ದ ಸೇನಾ ಕಮಾಂಡರ್‌ ಇಸ್ರೇಲ್‌ ದಾಳಿಗೆ ಬಲಿ

ಜೆರುಸಲೇಂ: ಹೋರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌(ಐಆರ್‌ಜಿಸಿ)ನ ನೌಕಾಪಡೆ ಕಮಾಂಡರ್‌ ಅಲಿರೇಜಾ ತಂಗಸಿರಿ ಅವರು ಅಮೆರಿಕ-ಇಸ್ರೇಲ್‌ ಜಂಟಿ ವಾಯು ದಾಳಿಗೆ ಬಲಿಯಾಗಿದ್ದಾರೆ.

 60 ದಿನ ಪೂರೈಸುವ ತೈಲ, 30 ದಿನದಷ್ಟು ಗ್ಯಾಸ್‌ ಸ್ಟಾಕ್‌: ಕೇಂದ್ರ

ನವದೆಹಲಿ: ಸದ್ಯ ದೇಶದ 2 ತಿಂಗಳ ಬೇಡಿಕೆ ಪೂರೈಸುವಷ್ಟು ಕಚ್ಚಾತೈಲ, 30 ದಿನಗಳಿಗೆ ಆಗುವಷ್ಟು ಅನಿಲ ದಾಸ್ತಾನು ಇದೆ. ದೇಶದ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.