ಸಾರಾಂಶ
ಸಂಘರ್ಷ ಪೀಡಿತ ಇರಾನ್‌ನಿಂದ ರಕ್ಷಿಸಿ ಭಾರತಕ್ಕೆ ಕರೆತರಲ್ಪಟ್ಟ ಬಳಿಕ ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ನಮಗೆ ದೆಹಲಿಯಿಂದ ಶ್ರೀನಗರಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಮಾಡಿಲ್ಲ ಎಂದು ದೂರಿದ್ದಾರೆ.
ಶ್ರೀನಗರ: ಸಂಘರ್ಷ ಪೀಡಿತ ಇರಾನ್‌ನಿಂದ ರಕ್ಷಿಸಿ ಭಾರತಕ್ಕೆ ಕರೆತರಲ್ಪಟ್ಟ ಬಳಿಕ ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ನಮಗೆ ದೆಹಲಿಯಿಂದ ಶ್ರೀನಗರಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಮಾಡಿಲ್ಲ ಎಂದು ದೂರಿದ್ದಾರೆ. ವಿದ್ಯಾರ್ಥಿಗಳ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಇರಾನ್‌ನ ಉರ್ಮಿಯಾ ವೈದ್ಯಕೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಅರ್ಮೇನಿಯಾ ಹಾಗೂ ಕತಾರ್ ರಾಜಧಾನಿ ದೋಹಾದ ಮೂಲಕ ಆಪರೇಷನ್ ಸಿಂಧು ಅಡಿಯಲ್ಲಿ ಗುರುವಾರ ಬೆಳಗ್ಗೆ ದೆಹಲಿಗೆ ಕರೆತರಲಾಗಿತ್ತು. ಇವರ ಪೈಕಿ 90 ಜನ ಕಾಶ್ಮೀರಿ ವಿದ್ಯಾರ್ಥಿಗಳಿದ್ದರು. ತಮ್ಮನ್ನು ಯುದ್ಧಗ್ರಸ್ತ ರಾಷ್ಟ್ರದಿಂದ ರಕ್ಷಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ವಿದ್ಯಾರ್ಥಿಗಳು, ‘ದೆಹಲಿಗೆ ಬಂದಿಳಿದ ನಾವು ತುಂಬಾ ಬಳಲಿದ್ದೆವು. ಅಲ್ಲಿಂದ ನಮ್ಮನಮ್ಮ ಮನೆಗಳಿಗೆ ತೆರಳಲು ಕಳಿಸಲಾಗಿದ್ದ ಬಸ್‌ನ ಸ್ಥಿತಿ ಸರಿ ಇರಲಿಲ್ಲ. ಇದರಿಂದ ನಮಗೆ ತೊಂದರೆಯಾಯಿತು’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದರು. ಇನ್ನು ಕೆಲ ವಿದ್ಯಾರ್ಥಿಗಳು ದೆಹಲಿಯಿಂದ ಶ್ರೀನಗರಕ್ಕೆ ತಮ್ಮನ್ನು ವಿಮಾನದಲ್ಲೇ ಕಳುಹಿಸಬೇಕಿತ್ತು ಎಂದು ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಡೀಲಕ್ಸ್ ಬಸ್ ವ್ಯವಸ್ಥೆ ಮಾಡಿದ್ದಾರೆ.
ಇರಾನ್ ಬಳಿಕ ಇಸ್ರೇಲ್‌ನಿಂದಲೂ ಭಾರತೀಯರ ಸ್ಥಳಾಂತರ
ನವದೆಹಲಿ: ‘ಆಪರೇಷನ್ ಸಿಂಧು’ ಮೂಲಕ ಸಂಘರ್ಷಪೀಡಿತ ಇರಾನ್‌ನಿಂದ ಭಾರತೀಯರನ್ನು ಕರೆತಂದ ಭಾರತ, ಇದೀಗ ಇಸ್ರೇಲ್‌ನಿಂದಲೂ ಭಾರತೀಯರನ್ನು ಕರೆತರುವ ಕಾರ್ಯ ಆರಂಭಿಸಿದೆ. ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಸ್ಥಳಾಂತರ ಪ್ರಕ್ರಿಯೆಯ ಸಿದ್ಧತೆ ನಡೆಸಿದೆ. ‘ಎಲ್ಲಾ ಭಾರತೀಯ ಪ್ರಜೆಗಳು ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಹೆಸರು (https://www.indembassyisrael.gov.in/indian_national_reg) ನೋಂದಾಯಿಸಿಕೊಳ್ಳಬೇಕು. ಯಾವುದೇ ಪ್ರಶ್ನೆಗಳಿದ್ದಲ್ಲಿ, ರಾಯಭಾರ ಕಚೇರಿಯಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು: ದೂರವಾಣಿ ಸಂಖ್ಯೆ: +972 54-7520711, +972 54-3278392; ಇಮೇಲ್: cons1.telaviv@mea.gov.in ’ ಎಂದು ರಾಯಭಾರ ಕಚೇರಿ ತಿಳಿಸಿದೆ. ಅಲ್ಲದೆ, ಭಾರತೀಯ ನಾಗರಿಕರು ಇಸ್ರೇಲ್ ಸರ್ಕಾರ ಬಿಡುಗಡೆ ಮಾಡಿದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.
ಇಸ್ರೇಲ್- ಇರಾನ್ ಸಂಘರ್ಷ: ಅಕ್ಕಿ, ಚಹಾ ರಫ್ತು ಸ್ಥಗಿತ?
ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ಭಾರತದಲ್ಲಿ ತೈಲ ಬೆಲೆ ಏರಿಕೆಯ ಆತಂಕವನ್ನು ಹೆಚ್ಚಿಸಿರುವ ನಡುವೆ, ಉಭಯ ದೇಶಗಳ ನಡುವೆ ನಿಲ್ಲದ ಕದನದಿಂದ ಇರಾನ್‌ಗೆ ರಫ್ತಾಗುತ್ತಿದ್ದ ಬಾಸ್ಮತಿ ಅಕ್ಕಿ ಮತ್ತು ಚಹಾದ ಸಾಗಣೆ ಕೂಡ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಭಾರತದಿಂದ ರಫ್ತಾಗುವ ಅಕ್ಕಿಗೆ ಇರಾನ್ ಬಹುದೊಡ್ಡ ಮಾರುಕಟ್ಟೆ. ಭಾರತದಿಂದ ವಿದೇಶಗಳಿಗೆ ವಾರ್ಷಿಕ ರಫ್ತಾಗುವ 60 ಲಕ್ಷ ಟನ್ ಅಕ್ಕಿಯ ಪೈಕಿ ಇರಾನ್‌ಗೆ 12 ಲಕ್ಷ ಟನ್ ಪೂರೈಕೆಯಾಗುತ್ತದೆ. ಮತ್ತೊಂದೆಡೆ ಇರಾನ್‌ಗೆ ವಾರ್ಷಿಕವಾಗಿ 20- 25 ಸಾವಿರ ಟನ್ ಚಹಾ ರಫ್ತಾಗುತ್ತಿದೆ. ಆದರೆ ಇದೀಗ ರಫ್ತು ರದ್ದಾಗುವ ಸಂದರ್ಭ ಸೃಷ್ಟಿಯಾಗಿದೆ. ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಬಾಸ್ಮತಿ ಅಕ್ಕಿ ಬೆಲೆ ಟನ್‌ಗೆ 8500- 9000 ರು.ಗೆ ಇಳಿದಿದೆ. ಹರಾಜಿನಲ್ಲಿ ಬೆಲೆ ಕುಸಿತವಾಗಬಹುದು ಎನ್ನುವ ಕಾರಣಕ್ಕೆ ರಫ್ತುದಾರರು ಹರಾಜಿನಲ್ಲಿ ಭಾಗಿಯಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.