ಸಾರಾಂಶ
ಜೈಪುರ: ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮವೊಂದು, ಟ್ರೇನಿ ಪಿಎಸ್ಐ ಒಬ್ಬರ ರಜಾಚೀಟಿಯಲ್ಲಿನ ತಪ್ಪಿನಿಂದ ಬೆಳಕಿಗೆ ಬಂದ ಕುತೂಹಲಕರ ಘಟನೆ ನಡೆದಿದೆ. ಹೀಗಾಗಿ ಈ ರೀತಿ ಅಕ್ರಮವಾಗಿ ನೇಮಕಗೊಂಡಿದ್ದ ಪಿಎಸ್ಐ ಮೋನಿಕಾ ಹಾಗೂ ಆಕೆಯು ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಆಕೆಗೆ ಉತ್ತರ ಹೇಳಿಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಈ ಘಟನೆ ರಾಜಸ್ಥಾನದ ಝುಂಝುನು ನಗರದಲ್ಲಿ ನಡೆದಿದ್ದು, ನಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿನ ಸಡಿಲತೆಯನ್ನು ಬಹಿರಂಗಪಡಿಸಿದೆ.
ಆಗಿದ್ದೇನು?:
2021ರ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಮೋನಿಕಾ ಎಂಬಾಕೆ ಹಿಂದಿ ಪರೀಕ್ಷೆಯಲ್ಲಿ 200ಕ್ಕೆ 184 ಹಾಗೂ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 200ಕ್ಕೆ 161 ಅಂಕ ಹಾಗೂ ಸಂದರ್ಶನದಲ್ಲಿ 15 ಅಂಕ ಪಡೆದಿದ್ದರು. ಈ ಮೂಲಕ 34ನೇ ರ್‍ಯಾಂಕ್ ಗಳಿಸಿದ್ದರು. ಬಳಿಕ ಅವರನ್ನು ಟ್ರೇನಿ ಪಿಎಸ್ಐ ಆಗಿ ನೇಮಿಸಿಕೊಳ್ಳಲಾಗಿತ್ತು.
ಈ ನಡುವೆ, ತರಬೇತಿಗೆ ಸೇರಿದ ಬಳಿಕ 2024ರ ಜೂ.5ರಿಂದ ಜು.2ರವರೆಗೆ ವೈದ್ಯಕೀಯ ರಜೆಯಲ್ಲಿದ್ದರು, ಆದರೆ ಯಾವುದೇ ವೈದ್ಯಕೀಯ ದಾಖಲೆಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಪುನಃ ಕರ್ತವ್ಯಕ್ಕೆ ಹಾಜರಾಗಲು ಆಕೆ ನ.11ರಂದು ಕೈಬರಹದ ರಜಾಚೀಟಿ ಸಲ್ಲಿಸಿದ್ದರು. ಆಗ ಅದರಲ್ಲಿದ್ದ ಅಕ್ಷರದೋಷಗಳನ್ನು ಕಂಡು ಹಿರಿಯ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಹಿಂದಿ ಭಾಷೆಯಲ್ಲಿದ್ದ ಕೇವಲ 20 ಸಾಲುಗಳ ಅರ್ಜಿಯಲ್ಲಿ ‘ನಾನು’, ‘ಇನ್ಸ್‌ಪೆಕ್ಟರ್’, ‘ಡಾಕ್ಯುಮೆಂಟ್’, ‘ಪ್ರೊಬೆಷನರ್’, ‘ಝುಂಝುನು’, ಇತ್ಯಾದಿ ಸರಳ ಪದಗಳೇ ತಪ್ಪಾಗಿದ್ದವು. ಇದರಿಂದ ಸಂಶಯಗೊಂಡು ಹಿರಿಯ ಅಧಿಕಾರಿಗಳು ತನಿಖೆ ನಡೆಸಿದಾಗ ಮೋನಿಕಾ ನಡೆಸಿದ್ದ ಪರೀಕ್ಷಾ ಅಕ್ರಮಗಳು ಬಯಲಾಗಿವೆ.
ಮೋನಿಕಾ ಸ್ವಂತವಾಗಿ ಉತ್ತರ ಬರೆಯದೇ ಬ್ಲೂಟೂತ್ ಸಾಧನ ಬಳಸಿ ಆಕೆ ನಕಲು ಮಾಡಿದ್ದಳು. ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ಪೌರವ್ ಕಲೀರ್, ಮೋನಿಕಾಗೆ ಉತ್ತರಗಳನ್ನು ಪೂರೈಸಲು 15 ಲಕ್ಷ ರು. ಪಡೆದಿದ್ದ. ಆತನೇ ಬ್ಲೂಟೂತ್ ಮೂಲಕ ಆಕೆಗೆ ಉತ್ತರ ಹೇಳಿಸಿಕೊಟ್ಟಿದ್ದ ಎಂದು ಗೊತ್ತಾಗಿದೆ. ಹೀಗಾಗಿ ಮೋನಿಕಾ ಹಾಗೂ ಕಲೀರ್ ಇಬ್ಬರ ಬಂಧನವಾಗಿದೆ.
ಟಾಪರ್ ಸಿಕ್ಕಿಬಿದ್ದಿದ್ದು ಹೇಗೆ?
ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಬಳಸಿ ಅಕ್ರಮ ಎಸಗಿ 34ನೇ ರ್‍ಯಾಂಕ್ ಪಡೆದಿದ್ದ ಮೋನಿಕಾ
ತರಬೇತಿ ವೇಳೆ ರಜಾಚೀಟಿ ಬರೆದಾಗ ಅದರಲ್ಲಿ ಭಾರೀ ಪ್ರಮಾಣದ ಕಾಗುಣಿತ ದೋಷ ಪತ್ತೆ
ಟಾಪರ್ ಇಷ್ಟು ತಪ್ಪು ಮಾಡಿದಕ್ಕೆ ಅನುಮಾನಗೊಂಡು ಪರಿಶೀಲಿಸಿದಾಗ ಟಾಪರ್ ಮೋಸ ಪತ್ತೆ
ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಮೋನಿಕಾ, ಅಕ್ರಮ ನೆರವಾಗಿದ್ದ ವ್ಯಕ್ತಿ ಬಂಧಿಸಿದ ಪೊಲೀಸರು