ಸಾರಾಂಶ
ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ, ವಿಪಕ್ಷ ಇಂಡಿಯಾ ಕೂಟದ ಜಂಟಿ ಅಭ್ಯರ್ಥಿ ನಿವೃತ್ತ ನ್ಯಾ। ಸುದರ್ಶನ್ ರೆಡ್ಡಿ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.
ನವದೆಹಲಿ: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ, ವಿಪಕ್ಷ ಇಂಡಿಯಾ ಕೂಟದ ಜಂಟಿ ಅಭ್ಯರ್ಥಿ ನಿವೃತ್ತ ನ್ಯಾ। ಸುದರ್ಶನ್ ರೆಡ್ಡಿ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಎಸ್‌ಪಿಯ ರಾಮಗೋಪಾಲ್ ಯಾದವ್, ಡಿಎಂಕೆಯ ತಿರುಚಿ ಸಿವಾ, ಟಿಎಂಸಿಯ ಸತಾಬ್ದಿ ರಾಯ್, ಶಿವಸೇನೆ(ಯುಟಿಬಿ)ಯ ಸಂಜಯ್ ರಾವುತ್, ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್ ಅವರ ಸಮ್ಮುಖದಲ್ಲಿ ರೆಡ್ಡಿ ಅವರು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಬಳಿಕ ಮಾತನಾಡಿದ ಅವರು, ‘ನಮ್ರತೆ, ಜವಾಬ್ದಾರಿ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಬದ್ಧತೆಯೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾದಲ್ಲಿ, ನಿಷ್ಪಕ್ಷಪಾತ, ಘನತೆಯೊಂದಿಗೆ ಕಾರ್ಯ ನಿರ್ವಹಿಸುತ್ತೇನೆ’ ಎಂದರು.