ವಯನಾಡಲ್ಲಿ ಭೂಮಿಯೊಳಗೆ ಭಾರೀ ನಿಗೂಢ ಶಬ್ದ : ಭೂಕಂಪದ ಸಾಧ್ಯತೆ ಬಗ್ಗೆ ಜನರಲ್ಲಿ ಆತಂಕ

| Published : Aug 10 2024, 01:32 AM IST / Updated: Aug 10 2024, 05:05 AM IST

ಸಾರಾಂಶ

400ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಇತ್ತೀಚಿನ ಭೀಕರ ಭೂಕುಸಿತದಿಂದ ಚೇತರಿಸಿಕೊಳ್ಳುವ ಮೊದಲೇ ಕೇರಳದ ವಯನಾಡು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಭೂಮಿಯಡಿ ಭಾರೀ ಸದ್ದು ಕೇಳಿಬಂದಿದೆ.

ವಯನಾಡು: 400ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಇತ್ತೀಚಿನ ಭೀಕರ ಭೂಕುಸಿತದಿಂದ ಚೇತರಿಸಿಕೊಳ್ಳುವ ಮೊದಲೇ ಕೇರಳದ ವಯನಾಡು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಭೂಮಿಯಡಿ ಭಾರೀ ಸದ್ದು ಕೇಳಿಬಂದಿದೆ. ಇದು, ಭೂಕಂಪವಿರಬಹುದು ಅಥವಾ ಭೂಕಂಪದ ಸಾಧ್ಯತೆ ಇರಬಹುದು ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

ವಯನಾಡು ಜಿಲ್ಲೆಯ ವೈಥಿರಿ ತಾಲೂಕಿನ ಅಂಬಲವಾಯಲ್‌ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ 10.15ರ ವೇಳೆಗೆ ನಿಗೂಢ ಶಬ್ದವೊಂದು ಕೇಳಿಬಂದಿದೆ. ಹೀಗಾಗಿ ಜನರು ಆತಂಕದಿಂದ ನಿರಾಶ್ರಿತ ಕೇಂದ್ರಗಳು, ಮನೆ, ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದಾರೆ. ಈ ಸಮಯದಲ್ಲಿ ಮನೆಯ ಕಿಟಕಿ ಗಾಜು ಅಲುಗಾಡಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜೊತೆಗೆ ಕಲ್ಲಿಕೋಟೆ ಹಾಗೂ ಪಾಲಕ್ಕಾಡ್‌ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಈ ರೀತಿಯ ಶಬ್ದ ಕೇಳಿಸಿದೆ ಎಂದು ವರದಿಯಾಗಿದೆ. ಈಗಾಗಲೇ ಭೂಕಂಪನದ ಬಗ್ಗೆ ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡವು ವಯನಾಡಿಗೆ ಭೇಟಿ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಯನಾಡು ಜಿಲ್ಲಾಧಿಕಾರಿ ಡಿ.ಆರ್‌.ಮೇಘಶ್ರೀ, ‘ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಜ್ಞರು ನಿಗೂಢ ಸದ್ದಿನ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗಿನ ದಾಖಲೆಗಳ ಅನ್ವಯ ಭೂಮಿ ಕಂಪಿಸಿದ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

ವಯನಾಡಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಭೂಕುಸಿತ ಸಂಭವಿಸಿದ ಕೇರಳದ ವಯನಾಡಿಗೆ ಶನಿವಾರ ಭೇಟಿ ನೀಡಲಿದ್ದು, ಪರಿಹಾರ ಹಾಗೂ ಪುನರ್ವಸತಿ ಕುರಿತು ಪರೀಶಿಲನೆ ನಡೆಸಲಿದ್ದಾರೆ. ಮೋದಿ ಬೆಳಿಗ್ಗೆ 11 ಗಂಟೆಗೆ ಕಣ್ಣೂರಿಗೆ ಬಂದಿಳಿಯಲಿದ್ದಾರೆ. ಬಳಿಕ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಲಿದ್ದಾರೆ. ಬಳಿಕ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿರುವ ನಿರಾಶ್ರಿತರ ಶಿಬಿರ, ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದು, ದುರಂತದಲ್ಲಿ ಬದುಕುಳಿದವರ ಜೊತೆಗೆ ಸಂವಾದ ನಡೆಸಲಿದ್ದಾರೆ. ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪರಿಹಾರ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.