ಕೇಜ್ರಿವಾಲ್‌ ತೀರ್ಪು ಕುರಿತ ಟೀಕೆಗೆ ಸ್ವಾಗತ: ಸುಪ್ರೀಂ

| Published : May 17 2024, 01:33 AM IST / Updated: May 17 2024, 05:32 AM IST

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಕ್ಷೇಪದ ಬೆನ್ನಲ್ಲೇ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ ತಾವು ಯಾವುದೇ ವಿಶೇಷ ಸವಲತ್ತಿನಡಿ ತೀರ್ಪು ನೀಡಿಲ್ಲ ಎಂದು ಸ್ಪಷ್ಟಪಡಿಸಿ ತನ್ನ ತೀರ್ಪಿನ ಕುರಿತು ವಿಶ್ಲೇಷಣಾತ್ಮಕ ಟೀಕೆಗಳನ್ನು ಸದಾ ಸ್ವಾಗತಿಸುತ್ತೇವೆ ಎಂದು ತಿಳಿಸಿದೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿದ ಬಳಿಕ ವ್ಯಕ್ತವಾದ ಟೀಕಾತ್ಮಕ ವಿಶ್ಲೇಷಣೆಗಳನ್ನು ತಾನು ಸ್ವಾಗತಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಅಲ್ಲದೆ ಜಾಮೀನು ನೀಡುವಾಗ ಯಾವುದೇ ವಿಶೇಷ ವಿನಾಯಿತಿ ನೀಡಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲು ಅನುವಾಗುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಈ ಕುರಿತು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದ ಅಮಿತ್‌ ಶಾ, ‘ಕೇಜ್ರಿವಾಲ್‌ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಎಂದಿನ ತೀರ್ಪಿನಂತಿರಲಿಲ್ಲ. ಅದು ಕೇಜ್ರಿವಾಲ್‌ ಅವರಿಗೆ ನೀಡಿದ ವಿಶೇಷ ಸೌಲಭ್ಯದಂತಿತ್ತು ಎಂದು ದೇಶದ ಜನರು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು.

ಗುರುವಾರ ವಿಚಾರಣೆಯೊಂದರ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡಿದ ನ್ಯಾ.ಸಂಜೀವ್‌ ಖನ್ನಾ ಹಾಗೂ ನ್ಯಾ. ದೀಪಂಕರ್ ದತ್ತಾ ಅವರಿದ್ದ ಪೀಠ,‘ ನಾವು ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ವೇಳೆ ದೆಹಲಿ ಮದ್ಯ ಲೈಸೆನ್ಸ್‌ ಹಗರಣದ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದೇವೆ ಹೊರತು ಜೈಲಿಗೆ ಹೋಗುವ/ ಬರುವ ವಿಚಾರವನ್ನು ಮಾತನಾಡಬಾರದು ಎಂದು ಹೇಳಿಲ್ಲ. ಕೇಜ್ರಿವಾಲ್‌ಗೆ ಜಾಮೀನು ನೀಡುವಾಗ ಯಾವುದೇ ವಿನಾಯ್ತಿ ನೀಡಿಲ್ಲ. ನಮಗೆ ಯಾವುದು ಸರಿ ಎನ್ನಿಸಿತೋ ಅದನ್ನು ನಾವು ನಮ್ಮ ಆದೇಶದಲ್ಲಿ ಹೇಳಿದ್ದೇವೆ. ಸುಪ್ರೀಂ ತನ್ನ ತೀರ್ಪುಗಳಿಗೆ ಬರುವ ಟೀಕಾತ್ಮಕ ವಿಶ್ಲೇಷಣೆಗಳನ್ನು ಎಂದಿಗೂ ಸ್ವಾಗತಿಸುತ್ತದೆ’ ಎಂದು ಹೇಳಿತು.