ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಹಾಗೂ ಪೊಲೀಸರು ತೆಗೆದುಕೊಂಡ ಕ್ರಮಗಳಿಂದ ಜನಜೀವನ ಅಸ್ತವ್ಯಸ್ತವಾದ ಬೆನ್ನಲ್ಲೇ, ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶಗಳನ್ನು ನೀಡಿದೆ.

ನವದೆಹಲಿ: ಶನಿವಾರ ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಹಾಗೂ ಪೊಲೀಸರು ತೆಗೆದುಕೊಂಡ ಕ್ರಮಗಳಿಂದ ಜನಜೀವನ ಅಸ್ತವ್ಯಸ್ತವಾದ ಬೆನ್ನಲ್ಲೇ, ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶಗಳನ್ನು ನೀಡಿದೆ.

ಭಾನುವಾರ ರಜಾದಿನವಾದ ಹೊರತಾಗಿಯೂ ನಡೆದ ವಿಶೇಷ ವಿಚಾರಣೆ ವೇಳೆ, ‘ಶಾಂತಿಯುತವಾಗಿ ಒಂದೆಡೆ ಸೇರುವವರನ್ನು ಕಾನೂನುಬಾಹಿರವಾಗಿ ಬಂಧಿಸಬಾರದು. ಮೆಟ್ರೋ ಸಂಚಾರ ಆರಂಭಿಸಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಇಂಟರ್ನೆಟ್‌ ಸೇವೆ ಮರುಸ್ಥಾಪಿಸಬೇಕು’ ಎಂದು ನ್ಯಾ। ಜಯ್‌ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠ ನಿರ್ದೇಶನ ನೀಡಿದೆ. ಜತೆಗೆ, ವಕೀಲರು, ಪತ್ರಕರ್ತರು ಮತ್ತು ಇತರರು ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಲೂ ಸೂಚಿಸಲಾಗಿದೆ.

ಅಕ್ರಮ ವಶ ಸಲ್ಲದು:

ಶನಿವಾರ ಸಿಜೆಪಿ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ಸುಮಾರು 7 ಸಾವಿರ ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದನ್ನು ಗಮನಿಸಿದ ಕೋರ್ಟ್‌, ‘ಯಾರನ್ನೂ ಅಕ್ರಮ ವಶಕ್ಕೆ ಪಡೆಯುವಂತಿಲ್ಲ. ಪ್ರಮುಖವಾಗಿ, ನಿರ್ಬಂಧ ಹೇರಲಾದ ಪ್ರದೇಶದ ಹೊರಗೆ ಶಾಂತಿಯುತವಾಗಿ ಸೇರಿರುವ ಜನರ ವಿರುದ್ಧ ಕ್ರಮ ಸಲ್ಲದು’ ಎಂದು ಹೇಳಿದೆ.

ಜತೆಗೆ, ‘ಬಿಎನ್‌ಎಸ್‌ಎಸ್‌ ಸೆಕ್ಷನ್‌ 163 ಅಡಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ’ ಎಂದು ಕೋರ್ಟ್ ಆವರಣದಲ್ಲಿ ಹಾಕಲಾಗಿರುವ ಸೂಚನಾ ಫಲಕವನ್ನು ತೆರವುಗೊಳಿಸುವಂತೆ ಆದೇಶಿಸಿದ ನ್ಯಾಯಮೂರ್ತಿಗಳು, ‘ನಾಗರಿಕರು ಮತ್ತು ಸಾರ್ವಜನಿಕರಿಗೆ ಕಾನೂನು ನೆರವು ಪಡೆಯಲು ಮುಕ್ತ ಅವಕಾಶ ಸಿಗಬೇಕು’ ಎಂದರು.

ಸರ್ಕಾರಕ್ಕೆ ನೋಟಿಸ್‌:

ದೆಹಲಿಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳ ಮೇಲೆ ಸಂಪೂರ್ಣ ನಿಷೇಧ ಹೇರಬಾರದೆಂಬ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇರೆಗೆ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಂತೆಯೇ, ಸಾಮೂಹಿಕ ಬಂಧನಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಆರೋಪಿಸಲಾಗಿರುವ ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾರಣೆ ಅ.13ರಂದು ನಡೆಯಲಿದೆ ಎಂದು ತಿಳಿಸಿದೆ.

ಸುಪ್ರೀಂ ನಿರ್ದೇಶನಗಳೇನು?:

- ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡಿ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಬೇಕು

- ಜನರ ಮುಕ್ತ ಸಂಚಾರಕ್ಕೆ ಅವಕಾಶ ಕೊಡಬೇಕು. ಬ್ಯಾರಿಕೇಡ್‌ಗಳ ಅಗತ್ಯವನ್ನು ಪರಿಶೀಲಿಸಬೇಕು.

- ಮೆಟ್ರೋ, ರೈಲು ಸೇವೆ ಪುನಃಸ್ಥಾಪನೆ. ಅಗತ್ಯವಿದ್ದರಷ್ಟೇ 19(2)ನೇ ವಿಧಿಯಡಿ ನಿರ್ಬಂಧಕ್ಕೆ ಅವಕಾಶ

- ವಕೀಲರು, ಪತ್ರಕರ್ತರು ಮತ್ತು ಇತರರ ವೃತ್ತಿಪರ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು

- ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆ ಶಾಂತಿಯುತ ಸಭೆಗೆ ಅವಕಾಶ ನೀಡಬೇಕು.

- ಸುಪ್ರೀಂ ಕೋರ್ಟ್ ಮತ್ತು ಇತರ ನ್ಯಾಯಾಲಯಗಳ ಪ್ರವೇಶಕ್ಕೆ ಮುಕ್ತ ಅವಕಾಶ ಒದಗಿಸಬೇಕು

- ಅ.13ರಂದು ಸಾಮೂಹಿಕ ಬಂಧನ, ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ

- ಪ್ರತಿಭಟನೆಗಳು ಶಾಂತಿಯುತವಾಗಿರಬೇಕೇ ಹೊರತು ಪ್ರಚೋದನಕಾರಿಯಾಗಿರಬಾರದು

- ಮೂಲಭೂತ ಹಕ್ಕುಗಳ ರಕ್ಷಣೆ, ಜಾರಿಗೆ ಸುಪ್ರೀಂ ಕೋರ್ಟ್ ಬದ್ಧ

ದೀಪ್ಕೆ ಅಜ್ಜಿ ಸತ್ತ ಸುದ್ದಿ ತಿಳಿಸಿದ್ದೇವೆ: ಪೊಲೀಸ್‌ ವಿಡಿಯೋ ಬಿಡುಗಡೆ

ನವದೆಹಲಿ: ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ, ಆತನ ಅಜ್ಜಿ ಮೃತಪಟ್ಟ ವಿಷಯವನ್ನು ಆತನಿಗೆ ಮುಟ್ಟಿಸಿದ್ದೇವೆ ಎಂದು ದೆಹಲಿ ಪೊಲೀಸರು ವಿಡಿಯೋ ಬಿಡುಗಡೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಅ.10ರಂದು ದೀಪ್ಕೆ ಪೊಲೀಸ್‌ ವಶದಲ್ಲಿದ್ದಾಗ, ಇತ್ತ ಅವರ ಅಜ್ಜಿ ಸಾವನ್ನಪ್ಪಿದ್ದರು. ಈ ವಿಷಯವನ್ನು ದೀಪ್ಕೆ ಅವರಿಗೆ ಪೊಲೀಸರು ತಿಳಿಸಿಲ್ಲ ಎಂದು ಸಿಜೆಪಿ ಆರೋಪಿಸಿತ್ತು. ಆದರೆ ತಾವು ವಿಷಯ ತಿಳಿಸಿದ ವಿಡಿಯೋವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡುವ ಮೂಲಕ ಸಿಜೆಪಿ ಬಣ್ಣಬಯಲು ಮಾಡಿದ್ದಾರೆ.

1 ವರ್ಷ ಶಾಂತಿ ಷರತ್ತಿನಡಿ ಜಿರಳೆ ನಾಯಕರ ಬಿಡುಗಡೆ 

ನವದೆಹಲಿ: ಶನಿವಾರ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ದೆಹಲಿ ಏರ್ಪೋರ್ಟಲ್ಲಿ ಬಂಧಿನಕ್ಕೊಳಗಾಗಿದ್ದ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ)ದ ಮುಖಂಡರಾದ ಅಭಿಜೀತ್‌ ದೀಪ್ಕೆ, ಅಶುತೋಷ್‌ ರಾಂಕಾ ಮತ್ತು ಸೌರವ್‌ ದಾಸ್‌ ಅವರನ್ನು ಭಾನುವಾರ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಭಾನುವಾರ ಎಲ್ಲರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ಒಂದು ವರ್ಷದವರೆಗೆ ಸನ್ನಡತೆ ಹಾಗೂ ಶಾಂತಿ ಕಾಪಾಡುವ ಷರತ್ತಿನ ಮೇಲೆ 50 ಸಾವಿರ ಬಾಂಡ್‌ನ ಶ್ಯೂರಿಟಿ ಪಡೆದು ಬಿಡುಗಡೆ ಮಾಡಲಾಗಿದೆ.ಅದರ ಬೆನ್ನಲ್ಲೇ, ‘ದೆಹಲಿ ಪೊಲೀಸರು ಕೊನೆಗೂ ದೀಪ್ಕೆ, ರಾಂಕಾ ಹಾಗೂ ಸೌರವ್‌ ದಾಸ್‌ರನ್ನು ಬಿಡುಗಡೆ ಮಾಡಿದ್ದಾರೆ. ಜಿರಳೆಗಳು ಯಾವತ್ತೂ ಸಾಯುವುದಿಲ್ಲ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಜೆಪಿ ಪೋಸ್ಟ್‌ ಹಂಚಿಕೊಂಡಿದೆ.

ಇದಕ್ಕೂ ಮೊದಲು ದೆಹಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಕಾನೂನು ಪ್ರಕಾರವಾಗಿಯೇ ಮೂವರನ್ನೂ ಬಂಧಿಸಲಾಗಿದೆ. ಬಂಧಿತರನ್ನು ದೆಹಲಿಯ ಕನ್ನೋಟ್‌ನಲ್ಲಿರುವ ಸಿಇಎಂ ಕೋರ್ಟ್‌ಗೆ ಭಾನುವಾರ ಹಾಜರುಪಡಿಸಲಾಗಿದೆ. ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ದೆಹಲಿಯ ಜಂತರ್‌ ಮಂತರ್‌ನಲ್ಲಿ ಶನಿವಾರ ಸಿಜೆಪಿ ಕರೆ ನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಪೊಲೀಸರು 7 ಸಾವಿರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದರು.

ಪೊಲೀಸರು ನನ್ನನ್ನು ಕಿಡ್ನಾಪ್‌ ಮಾಡಿದರು: ಧ್ರುವ್‌ ರಾಠಿ ಆರೋಪ

ನವದೆಹಲಿ: ‘ಪೊಲೀಸರು ನನ್ನನ್ನು ಬಂಧಿಸಲೂ ಇಲ್ಲ, ವಶಕ್ಕೆ ಪಡೆಯಲೂ ಇಲ್ಲ. ಬದಲಾಗಿ ಕಿಡ್ನಾಪ್‌ ಮಾಡಿದರು’ ಎಂದು ಯುಟ್ಯೂಬರ್‌ ಹಾಗೂ ಸಿಜೆಪಿ ಬೆಂಬಲಿಗ ಧ್ರುವ್‌ ರಾಠಿ ಭಾನುವಾರ ಆರೋಪಿಸಿದ್ದಾರೆ. ಅ.10ರಂದು ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ಹೊರಡಲು ಸಜ್ಜಾಗಿದ್ದ ಧ್ರುವ್‌ರನ್ನು ಗುರುಗ್ರಾಮದ ಅವರ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು.

ತಮ್ಮ ಬಿಡುಗಡೆ ಬಳಿಕ ಮೊದಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಧ್ರುವ್‌, ‘ಅವರು ನನ್ನನ್ನು ಬಂಧಿಸಲಿಲ್ಲ, ವಶಕ್ಕೆ ಪಡೆಯಲೂ ಇಲ್ಲ. ಬದಲಾಗಿ ನಾನು ಮಲಗಿದ್ದಾಗ ನನ್ನ ಮನೆಗೆ ಬಂದು ಕಿಡ್ನಾಪ್‌ ಮಾಡಿದರು’ ಎಂದು ಕಿಡಿ ಕಾರಿದ್ದಾರೆ. ಇದೇ ವೇಳೆ, ತಾವು ಭಾರತೀಯ ಪ್ರಜೆ ಅಲ್ಲ ಎಂಬ ಆರೋಪಕ್ಕೆ ಪಾಸ್‌ಪೋರ್ಟ್‌ ತೋರಿಸಿ ಸ್ಪಷ್ಟನೆ ನೀಡಿದ ಅವರು, ‘ಇಲ್ಲಿದೆ ನನ್ನ ಪಾಸ್‌ಪೋರ್ಟ್. ನಾನು ಭಾರತೀಯ ಪ್ರಜೆಯಾಗಿದ್ದೇನೆ, ಆಗಿದ್ದೆ ಮತ್ತು ಮುಂದೆಯೂ ಆಗಿರುತ್ತೇನೆ. ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.