ಗೃಹಿಣಿಯರನ್ನು ‘ರಾಷ್ಟ್ರ ನಿರ್ಮಾತೃಗಳು’ ಎಂದು ಕರೆದಿರುವ ಸುಪ್ರೀಂ ಕೋರ್ಟ್, ಅಪಘಾತದಂಥ ಘಟನೆಗಳಲ್ಲಿ ಆಕೆಯ ಸಾವು, ಅಂಗವೈಕಲ್ಯ ಸಂಭವಿಸಿದಾಗ ಮೋಟಾರು ವಾಹನ ಕಾಯ್ದೆಯಡಿ ಪರಿಹಾರ ನಿಗದಿಮಾಡುವಾಗ ನ್ಯಾಯಾಲಯಗಳು ಆಕೆಯ ಕನಿಷ್ಠ ಮಾಸಿಕ ವೇತನ 30 ಸಾವಿರ ರು. ಎಂದು ಪರಿಗಣಿಸಬೇಕು.

ನವದೆಹಲಿ: ಗೃಹಿಣಿಯರನ್ನು ‘ರಾಷ್ಟ್ರ ನಿರ್ಮಾತೃಗಳು’ ಎಂದು ಕರೆದಿರುವ ಸುಪ್ರೀಂ ಕೋರ್ಟ್, ಅಪಘಾತದಂಥ ಘಟನೆಗಳಲ್ಲಿ ಆಕೆಯ ಸಾವು, ಅಂಗವೈಕಲ್ಯ ಸಂಭವಿಸಿದಾಗ ಮೋಟಾರು ವಾಹನ ಕಾಯ್ದೆಯಡಿ ಪರಿಹಾರ ನಿಗದಿಮಾಡುವಾಗ ನ್ಯಾಯಾಲಯಗಳು ಆಕೆಯ ಕನಿಷ್ಠ ಮಾಸಿಕ ವೇತನ 30 ಸಾವಿರ ರು. ಎಂದು ಪರಿಗಣಿಸಬೇಕು. ‘ಮನೆಯ ಆರೈಕೆಯ ನಷ್ಟ’ ಎಂಬ ಪ್ರತ್ಯೇಕ ಕೆಟಗರಿಯಲ್ಲಿ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.

ವಾಹನ ಅಪಘಾತ ಪ್ರಕರಣವೊಂದರಲ್ಲಿ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಗೆ ನ್ಯಾ.ಸಂಜೊಯ್‌ ಕರೋಲ್‌ ಮತ್ತು ಎನ್‌.ಕೋಟೀಶ್ವರ್‌ ಸಿಂಗ್‌ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

ಮನೆ ಕೆಲಸ ನೋಡಿಕೊಳ್ಳುವ ಮಹಿಳೆಯನ್ನು ‘ಗೃಹಿಣಿ’ ಎಂದು ಕರೆದರೆ ಆಕೆಯ ಕೊಡುಗೆಯನ್ನು ಕೀಳಂದಾಜಿಸಿದಂತಾಗುತ್ತದೆ. ಆಕೆಯ ಪಾತ್ರ ಮನೆಕೆಲಸಕ್ಕಷ್ಟೇ ಸೀಮಿತವಾಗಿಲ್ಲ, ಇದರ ಜತೆಗೆ ಕುಟುಂಬವನ್ನು ರೂಪಿಸುವ, ಭವಿಷ್ಯದ ತಲೆಮಾರನ್ನು ಪೋಷಿಸುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಲ್ಲೂ ಆಕೆಯ ಪಾತ್ರ ಮಹತ್ವದ್ದಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಗೃಹಿಣಿಯನ್ನು ಕುಟುಂಬದ ದುಡಿಯುವ ಸದಸ್ಯರಿಗೆ ಅವಲಂಬಿತಳು ಎಂದು ಹೇಳಲಾಗುತ್ತದೆ. ಆದರೆ ನಿಜಾರ್ಥದಲ್ಲಿ ಗೃಹಿಣಿಯ ಮೇಲೆಯೇ ಇಡೀ ಕುಟುಂಬದ ದುಡಿಯುವ ಸದಸ್ಯರು ಅವಲಂಬಿತವಾಗಿರುತ್ತಾರೆ ಎಂದಿರುವ ಕೋರ್ಟ್‌, ಗೃಹಿಣಿಯು ಮಾನವ ಕುಲದ ಬೆಳವಣಿಗೆಗೆ ಹಾಗೂ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತಾಳೆ ಎಂಬುದು ನಮ್ಮ ಭಾವನೆ. ಗೃಹಿಣಿಯು ರಾಷ್ಟ್ರ ನಿರ್ಮಾಣ ಮಾಡುತ್ತಾಳೆ. ಹೀಗಾಗಿ ಅಪಘಾತದಂಥ ದುರ್ಘಟನೆಯಲ್ಲಿ ಆಕೆಯ ಸಾವು ಸಂಭವಿಸಿದರೆ ಆಕೆಯ ಕುಟುಂಬಕ್ಕೆ ಪ್ರತ್ಯೇಕ ಮತ್ತು ಸ್ವತಂತ್ರ ಕೆಟಗರಿಯ ಅಡಿ ಪರಿಹಾರ ನೀಡಬೇಕಾಗಿದೆ ಎಂದಿದೆ.

ಜತೆಗೆ, ಗೃಹಿಣಿಯರ ಗೃಹ ಸೇವೆಯ ಮೌಲ್ಯಮಾಪನ ಮಾಡಲು ಮಾರ್ಗಸೂಚಿಯೊಂದನ್ನೂ ನಿಗದಿಪಡಿಸಿದೆ. ಇದನ್ನು ಮಾಸಿಕವಾಗಿ ಕನಿಷ್ಠ 30 ಸಾವಿರ ರು. ಎಂದು ನಿಗದಿಪಡಿಸಿರುವುದಾಗಿ ಕೋರ್ಟ್‌ ಹೇಳಿದೆ.

ಏನಿದು ಪ್ರಕರಣ?:

2001ರಲ್ಲಿ ಪಂಜಾಬ್‌ನಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಆಕೆಯ ಪತಿ, ಮಕ್ಕಳು ಮೋಟಾರು ಅಪಘಾತ ಕ್ಲೈಮುಗಳ ನ್ಯಾಯಮಂಡಳಿ ಮುಂದೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದರು. ನ್ಯಾಯಮಂಡಳಿಯು 2.42 ಲಕ್ಷ ಪರಿಹಾರ ನೀಡಿತ್ತು. ಇದರ ವಿರುದ್ಧ ಕುಟುಂಬವು ಹರ್ಯಾಣ ಹೈಕೋರ್ಟ್‌ ಮೊರೆ ಹೋಗಿತ್ತು. ಹೈಕೋರ್ಟ್‌ ಪರಿಹಾರದ ಮೊತ್ತವನ್ನು ಹೆಚ್ಚಿಸಿ 8.43 ಲಕ್ಷಕ್ಕೆ ನಿಗದಿಪಡಿಸಿತ್ತು. ಈ ಹಣವನ್ನು ಶೇ.7.5 ಬಡ್ಡಿದರದೊಂದಿಗೆ ಪಾವತಿಸಲು ಸೂಚಿಸಿತ್ತು. ಇದಕ್ಕೆ ತೃಪ್ತರಾಗದ ಕುಟುಂಬ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಕೋರ್ಟ್‌ ಹೇಳಿದ್ದೇನು?

- ಮನುಕುಲ ಹಾಗೂ ರಾಷ್ಟ್ರದ ಏಳಿಗೆಗೆ ಪ್ರತಿ ಕುಟುಂಬದ ಗೃಹಿಣಿಯೂ ಕೊಡುಗೆ ನೀಡುತ್ತಾಳೆ. ಹೀಗಾಗಿ ಆಕೆ ರಾಷ್ಟ್ರ ನಿರ್ಮಾತೃ

- ದುಡಿವ ಸದಸ್ಯರ ಮೇಲೆ ಗೃಹಿಣಿ ಅವಲಂಬಿತ ಎನ್ನುವುದೇ ಅಣಕ. ಇಡೀ ಮನೆ ಕೆಲಸ ಅವಲಂಬಿತವಾಗಿರುವುದೇ ಆಕೆಯ ಮೇಲೆ

- ಹಾಗೆ ನೋಡಿದರೆ, ಕುಟುಂಬದ ದುಡಿಯುವ ಸದಸ್ಯರೇ ಆಕೆ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಆಕೆಗೆ ಮನ್ನಣೆ ಸಿಗುತ್ತಿಲ್ಲ

- ರಾಷ್ಟ್ರ ನಿರ್ಮಾತೃ ಆದ ಗೃಹಿಣಿ ಒಂದು ವೇಳೆ ಅಪಘಾತದಲ್ಲಿ ಮರಣ ಹೊಂದಿದರೆ, ಕುಟುಂಬಕ್ಕೆ ಆರೈಕೆಯ ನಷ್ಟವಾಗುತ್ತದೆ: ಕೋರ್ಟ್‌