ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಬಂಧನ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ನಕಾರ ವ್ಯಕ್ತಪಡಿಸಿದೆ. ಈ ನಡುವೆ 5 ದಿನ ಹೇಮಂತ್‌ ಅವರನ್ನು ಇ.ಡಿ ವಶಕ್ಕೆ ನೀಡಿದೆ.

 ರಾಂಚಿ: ಭೂ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅದರ ಬದಲು ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದೆ.

ಇದೇ ವೇಳೆ, ರಾಂಚಿಯ ವಿಶೇಷ ಪಿಎಂಎಲ್‌ಎ (ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ) ನ್ಯಾಯಲಯವು ಹೇಮಂತ್‌ ಅವರನ್ನು 5 ದಿನಗಳ ಕಾಲ ಇ.ಡಿ ವಶಕ್ಕೆ ಒಪ್ಪಿಸಿದೆ.

ಪ್ರಕರಣದ ತನಿಖೆಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೀಡಿದ್ದ ಎಲ್ಲ ಸಮನ್ಸ್‌ಗಳಿಗೂ ಗೈರಾಗಿದ್ದ ಹೇಮಂತ್‌ ಅವರನ್ನು ಬುಧವಾರ ರಾತ್ರಿ ಇ.ಡಿ ಬಂಧಿಸಿತ್ತು. ಅದಾದ ಬಳಿಕ ತಮ್ಮ ಬಂಧನ ಪ್ರಶ್ನಿಸಿ ಜಾರ್ಖಂಡ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹೇಮಂತ್, ಬಳಿಕ ಅರ್ಜಿ ಹಿಂಪಡೆದು ನೇರವಾಗಿ ಸುಪ್ರೀಂ ಮೊರೆ ಹೋಗಿದ್ದರು.

ಸಂಸತ್ತಲ್ಲಿ ಸಭಾತ್ಯಾಗ:ಇನ್ನು ಹೇಮಂತ್‌ ಬಂಧನ ವಿರೋಧಿಸಿ ಹಾಗೂ ಹೊಸ ಸರ್ಕಾರ ರಚನೆಗೆ ತಡವಾಗಿ ಆಹ್ವಾನ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಶುಕ್ರವಾರ ವಿರೋಧ ಪಕ್ಷಗಳು ಪ್ರತಿಭಟಿಸಿ, ಹೊರನಡೆದವು.