ಚುನಾವಣಾ ಬಾಂಡ್‌ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸಲು ಮತ್ತಷ್ಟು ಕಾಲಾವಕಾಶ ಕೋರಿರುವ ಎಸ್‌ಬಿಐ ಅರ್ಜಿಯ ಜೊತೆಗೆ ಎಡಿಆರ್‌ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೂ ವಿಚಾರಣೆಗೆ ಬರಲಿದೆ.

ನವದೆಹಲಿ: ಚುನಾವಣಾ ಬಾಂಡ್‌ಗಳಲ್ಲಿ ನಡೆಸಿದ ವಹಿವಾಟುಗಳನ್ನು ಬಹಿರಂಗಗೊಳಿಸುವ ಕುರಿತು ಮತ್ತಷ್ಟು ಕಾಲಾವಕೋಶ ಕೋರಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮನವಿಯನ್ನು ಸುಪ್ರೀಂ ಕೋರ್ಟ್‌ ಮಾ.11ಕ್ಕೆ ವಿಚಾರಣೆ ನಡೆಸಲಿದೆ. 

ಇದೇ ವೇಳೆ ಸುಪ್ರೀಂ ಕೋರ್ಟ್‌ ಆದೇಶದಂತೆ ಮಾ.6ರೊಳಗೆ ಎಸ್‌ಬಿಐ ಚುನಾವಣಾ ಬಾಂಡ್‌ ಕುರಿತ ವಹಿವಾಟುಗಳನ್ನು ಬಹಿರಂಗ ಮಾಡಿಲ್ಲ ಎಂದು ಎಡಿಆರ್‌ ಎಂಬ ಎನ್‌ಜಿಒ ಸಲ್ಲಿಸಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನೂ ಆಲಿಸಲಿದೆ. 

ಫೆ.15ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದಲ್ಲಿ ಎಸ್‌ಬಿಐ ಮಾ.6ರೊಳಗೆ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬಹಿರಂಗ ಮಾಡಬೇಕು ಎಂದು ಆದೇಶಿಸಿತ್ತು. 

ಇದಕ್ಕೆ ಪ್ರತಿಯಾಗಿ ಮಾ.4ರಂದು ಎಸ್‌ಬಿಐ ತನಗೆ ಬಹಿರಂಗ ಮಾಡಲು ಜೂ.30ರವರೆಗೂ ಕಾಲಾವಕಾಶ ಕೋರಿ ಮನವಿ ಮಾಡಿತ್ತು. ಈ ನಡುವೆ ಎಡಿಆರ್‌ ಎಂಬ ಎನ್‌ಜಿಒ ಮಾ.7ರಂದು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.