ಸಾರಾಂಶ
ನವದೆಹಲಿ: ಗುಜರಾತ್‌ನ ಸೂರತ್‌ನಲ್ಲಿ ಕಡೆಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ವಜಾಗೊಂಡು, ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆಯಾದ ರೀತಿಯಲ್ಲೇ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ದೊಡ್ಡ ಆಘಾತ ಎದುರಾಗಿದೆ.
ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿ ಅಕ್ಷಯ್ ಬಾಮ್ ಕೊನೇ ದಿನ ನಾಮಪತ್ರ ಹಿಂಪಡೆದು ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಅದರ ಬೆನ್ನಲ್ಲೇ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ‘ಇಂದೋರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಕ್ಷಯ್ ಕಾಂತಿ ಬಾಮ್ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ’ ಎಂದು ಅಡಿಬರಹ ಹಾಕಿ ತಾವಿಬ್ಬರು ಕಾರ್‌ನಲ್ಲಿ ಜೊತೆಗಿರುವ ಚಿತ್ರವನ್ನು ಟ್ಯಾಗ್ ಮಾಡಿದ್ದಾರೆ.
ಅಕ್ಷಯ್ ಅವರಂತೆಯೇ ಇಂದೋರ್‌ನಲ್ಲಿ ಸ್ಪರ್ಧಿಸಿದ್ದ ಇತರೆ 8 ಅಭ್ಯರ್ಥಿಗಳೂ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ಇದೀಗ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಂತೆ ಆಗಿದೆ. ಈ ಪೈಕಿ ಯಾರೂ ಪ್ರಬಲ ಅಭ್ಯರ್ಥಿಗಳಲ್ಲದ ಕಾರಣ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ಶಂಕರ್ ಲಾಲ್ವಾನಿಯವರ ಗೆಲುವಿನ ಹಾದಿ ಸುಗಮಗೊಂಡಿದೆ.
ಇದಕ್ಕೂ ಮೊದಲು ಬಿಜೆಪಿಯು, ಅಕ್ಷಯ್ ಕಾಂತಿ ಅವರು ನಾಮಪತ್ರದಲ್ಲಿ ತಪ್ಪಾದ ಮಾಹಿತಿ ಸಲ್ಲಿಸಿದ ಕಾರಣ ನಾಮಪತ್ರ ತಿರಸ್ಕಾರ ಮಾಡಬೇಕೆಂದು ಚುನಾವಣಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿತ್ತು. ಇಂದೋರ್‌ನಲ್ಲಿ ನಾಮಪತ್ರ ಹಿಂಪಡೆಯಲು ಸೋಮವಾರವೇ ಕಡೇ ದಿನವಾಗಿದ್ದು, ಮೇ.13ರಂದು ಮತದಾನ ನಡೆಯಲಿದೆ.