1 ಕೋಟಿ ಮನೆಗೆ ಪ್ರತಿ ತಿಂಗಳು 300 ಯುನಿಟ್‌ ವಿದ್ಯುತ್‌ ಉಚಿತ

| Published : Feb 02 2024, 01:00 AM IST / Updated: Feb 02 2024, 07:40 AM IST

Solar Panel

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಘೋಷಿಸಿದ್ದ 1 ಕೋಟಿ ಮನೆಗಳಿಗೆ ಸೋಲಾರ್‌ ಛಾವಣಿ ಅಳವಡಿಸುವ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡಲಾಗಿದೆ.

ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮಮಂದಿರದಲ್ಲಿ ಬಾಲಕ ರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಘೋಷಿಸಿದ್ದ 1 ಕೋಟಿ ಮನೆಗಳಿಗೆ ಸೋಲಾರ್‌ ಛಾವಣಿ ಅಳವಡಿಸುವ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡಲಾಗಿದೆ.

ಈ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು 300 ಯುನಿಟ್‌ಗಳಷ್ಟು ಉಚಿತ ವಿದ್ಯುತ್‌ ನೀಡಲಾಗುವುದು. ಜೊತೆಗೆ, ಅವರು ಉತ್ಪಾದಿಸಿದ ಹೆಚ್ಚುವರಿ ಸೌರವಿದ್ಯುತ್ತನ್ನು ವಿದ್ಯುತ್‌ ವಿತರಕ ಕಂಪನಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ಬಜೆಟ್‌ ಭಾಷಣದಲ್ಲಿ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠೆಯನ್ನು ಉಲ್ಲೇಖಿಸಿದ ಅವರು, ‘ಅಯೋಧ್ಯೆಯಲ್ಲಿ ನಡೆದ ಐತಿಹಾಸಿಕ ಪ್ರಾಣಪ್ರತಿಷ್ಠೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಯೋಜನೆಯಡಿ ಈ ಕೆಳಕಂಡ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ’ ಎಂದು ಪ್ರಕಟಿಸಿದರು.

  • ಛಾವಣಿ ಸೌರಶಕ್ತೀಕರಣ ಯೋಜನೆಯಡಿ ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ಉಚಿತವಾಗಿ ಅವರೇ ಉತ್ಪಾದಿಸಿದ 300 ಯುನಿಟ್‌ ಸೌರವಿದ್ಯುತ್‌ ಲಭಿಸಲಿದೆ.
  • 300ಕ್ಕಿಂತ ಹೆಚ್ಚು ಯುನಿಟ್‌ ಸೌರವಿದ್ಯುತ್‌ ಉತ್ಪಾದಿಸಿದರೆ ಅದನ್ನು ಅವರು ವಿದ್ಯುತ್‌ ವಿತರಕ ಕಂಪನಿಗಳಿಗೆ ಮಾರಾಟ ಮಾಡಬಹುದು. - ಈ ಸೌರವಿದ್ಯುತ್‌ ಬಳಸಿ ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಬಹುದು. 
  • ಈ ಯೋಜನೆಯಿಂದ ದೊಡ್ಡ ಸಂಖ್ಯೆಯ ವ್ಯಾಪಾರಿಗಳಿಗೆ ಸೌರವಿದ್ಯುತ್‌ ಘಟಕಗಳನ್ನು ಪೂರೈಸುವ ಹಾಗೂ ಅಳವಡಿಸುವ ಕೆಲಸ ಲಭಿಸಲಿದೆ.
  • ಸೌರಛಾವಣಿ ಯೋಜನೆಯಿಂದ ಉತ್ಪಾದನಾ ಕ್ಷೇತ್ರದಲ್ಲಿ ಹಾಗೂ ಸೌರ ಉಪಕರಣಗಳ ಅಳವಡಿಕೆ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ.