- ಜೈಲಿನ ವಾರ್ಡನ್ ಮೇಲೆ ಹಲ್ಲೆ ಯತ್ನ- ಧರ್ಮದ ಪರ ಘೋಷಣೆ ಕೂಗಿ ಗದ್ದಲ- ಬೇರೆ ಕೈದಿಗಳ ಹೆಸರಿನಲ್ಲಿ ಚಿಕಿತ್ಸೆ ಪಡೆಯಲು ಜೈಲಿನ ಆಸ್ಪತ್ರೆಗೆ ಬಂದಿದ್ದ ಶಂಕಿತ ಉಗ್ರರು
- ಇದನ್ನು ವಾರ್ಡನ್ ಪ್ರಶ್ನಿಸಿದ್ದಕ್ಕೆ ವಾಗ್ವಾದ. ಗಲಾಟೆ. ಹಲ್ಲೆ ಮಾಡಲು ಯತ್ನ, ಭಾರಿ ಗದ್ದಲ- ಈ ವೇಳೆ ಒಂದು ಕೋಮಿನ 50 ಕೈದಿಗಳು ಜಮಾವಣೆ. ವಾರ್ಡನ್ ನಡೆ ಬಗ್ಗೆ ಆಕ್ರೋಶ
- ಒಂದು ಧರ್ಮದ ಪರ ಹಾಗೂ ವಾರ್ಡನ್ ವಿರುದ್ಧ ಘೋಷಣೆ. ಜೈಲಿನಲ್ಲಿ ಉದ್ವಿಗ್ನ ಸ್ಥಿತಿ--
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರರು ಜೈಲು ಸಿಬ್ಬಂದಿ ಜತೆ ವಾಗ್ವಾದ ಮಾಡಿ, ಧರ್ಮದ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಪುಂಡಾಟ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಾಲ್ಕೈದು ದಿನಗಳ ಹಿಂದೆ ಜೈಲಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಪ್ರಕರಣದ ಮೂವರು ಕೈದಿಗಳು ಚಿಕಿತ್ಸೆಗಾಗಿ ಜೈಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಅವರನ್ನು ಜೈಲು ವಾರ್ಡನ್ ಪ್ರಶ್ನಿಸಿದ್ದಾರೆ. ಆಗ ಕೋಪಗೊಂಡ ಕೈದಿಗಳು ವಾರ್ಡನ್ ಜತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೆ, ಹಲ್ಲೆಗೂ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.ಪ್ರಕರಣದ ವಿವರ:
ನಾಲ್ಕೈದು ದಿನಗಳ ಹಿಂದೆ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು ಚಿಕಿತ್ಸೆಗಾಗಿ ಜೈಲಿನ ಆಸ್ಪತ್ರೆಗೆ ಬಂದಿದ್ದರು. ನಂತರ ಪರಿಶೀಲಿಸಿದಾಗ ಕೈದಿಗಳು ಬೇರೆ ಕೈದಿಗಳ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಜೈಲು ವಾರ್ಡನ್ ದಾಖಲೆಗಳನ್ನು ಪರಿಶೀಲಿಸಿದಾಗ ಇವರ ಅಸಲಿ ಗುರುತು ಪತ್ತೆಯಾಗಿದೆ.ಬೇರೆ ಕೈದಿಗಳ ಹೆಸರಿನಲ್ಲಿ ಏಕೆ ಬಂದಿದ್ದೀರಿ ಎಂದು ವಾರ್ಡನ್ ಪ್ರಶ್ನಿಸಿದಾಗ, ಇದರಿಂದ ಕೆರಳಿದ ಕೈದಿಗಳು ವಾರ್ಡನ್ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರ ತಿಳಿದ ಒಂದೇ ಸಮುದಾಯದ ಸುಮಾರು 50ಕ್ಕೂ ಹೆಚ್ಚು ಕೈದಿಗಳು ಒಂದೆಡೆ ಜಮಾಯಿಸಿ, ವಾರ್ಡನ್ ವಿರುದ್ಧ ಘೋಷಣೆ ಕೂಗಿದ್ದಾರೆ. ಜತೆಗೆ ಒಂದು ಧರ್ಮದ ಪರ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಕರ್ತವ್ಯದಲ್ಲಿದ್ದ ಜೈಲು ವಾರ್ಡನ್ ಮೇಲೂ ಹಲ್ಲೆ ನಡೆಸಲು ಸಹ ಯತ್ನಿಸಿದ್ದಾರೆ. ಇದರಿಂದಾಗಿ ಜೈಲು ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜೈಲಿನ ಹಿರಿಯ ಅಧಿಕಾರಿಗಳು, ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.