3 ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌

| Published : Oct 09 2025, 02:00 AM IST

ಸಾರಾಂಶ

ಮೂವರು ದಿಗ್ಗಜ ವಿಜ್ಞಾನಿಗಳಾದ ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್‌ ರಾಬ್ಸನ್‌ ಮತ್ತು ಅಮೆರಿಕದ ಒಮರ್‌ ಎಂ.ಯಾಗ್ಹಿ ಅವರಿಗೆ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್‌ ಒಲಿದಿದೆ.

- ಮೆಟಲ್‌ ಆರ್ಗ್ಯಾನಿಕ್‌ ಫ್ರೇಮ್‌ವರ್ಕ್‌ ಅಭಿವೃದ್ಧಿಗೆ ಪ್ರಶಸ್ತಿ

- ಜಪಾನ್‌, ಆಸ್ಟ್ರೇಲಿಯಾ, ಅಮೆರಿಕದ ವಿಜ್ಞಾನಿಗಳಿಗೆ ಗೌರವ

- ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್‌ ರಾಬ್ಸನ್‌, ಅಮೆರಿಕದ ಒಮರ್‌ ಎಂ.ಯಾಗ್ಹಿಗೆ ಪ್ರಶಸ್ತಿಸ್ಟಾಕ್‌ಹೋಮ್‌: ಮೂವರು ದಿಗ್ಗಜ ವಿಜ್ಞಾನಿಗಳಾದ ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್‌ ರಾಬ್ಸನ್‌ ಮತ್ತು ಅಮೆರಿಕದ ಒಮರ್‌ ಎಂ.ಯಾಗ್ಹಿ ಅವರಿಗೆ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್‌ ಒಲಿದಿದೆ.

‘ಮೆಟಲ್‌-ಆರ್ಗ್ಯಾನಿಕ್‌ ಚೌಕಟ್ಟು’ (ಎಂಒಎಫ್‌) ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇವರ ಈ ಸಂಶೋಧನೆಯು ರಸಾಯನ ಶಾಸ್ತ್ರದ ಅಧ್ಯಯನಕ್ಕೆ ಹೊಸ ದಿಕ್ಕು ನೀಡಿದೆ ಎಂದು ಹೇಳಲಾಗಿದೆ.ಸಂಶೋಧನೆಯ ಪ್ರಯೋಜನ ಏನು?:

ಇವರು ಅಭಿವೃದ್ಧಿಪಡಿಸಿದ ಸಂರಚನೆಯು ವಿಷಕಾರಿ ಗ್ಯಾಸ್‌ಗಳನ್ನು ಹೀರಿಕೊಳ್ಳಲು, ಹಿಡಿದಿಟ್ಟುಕೊಳ್ಳಲು ನೆರವು ನೀಡುತ್ತದೆ. ಜತೆಗೆ, ಈಗ ಸಾಮಾನ್ಯವಾಗಿ ಬಳಕೆಯಾಗುವ ವಾತಾವರಣದಿಂದ ಕಾರ್ಬನ್‌ ಡೈಆಕ್ಸೈಡ್‌ ಅನ್ನು ಹೀರಿಕೊಳ್ಳುವ ಅಥವಾ ಶುಷ್ಕ ಮರುಭೂಮಿಯ ಗಾಳಿಯಲ್ಲಿ ನೀರನ್ನು ಹೀರಿಕೊಳ್ಳುವ ವಸ್ತುಗಳ ಅಭಿವೃದ್ಧಿಗೆ ಪೂರಕವಾಗಿದೆ.

ಏನಿದು ಎಂಒಎಫ್‌?:

ವಿಭಿನ್ನ ಅಣುಗಳನ್ನು ವಿಶೇಷ ರೀತಿಯಲ್ಲಿ ಸಂಯೋಜಿಸಿ ವಿಶಿಷ್ಟವಾದ ಸಂರಚನೆಯನ್ನು ಈ ಮೂವರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಸಂರಚನೆ ಅಥವಾ ಎಂಒಎಫ್‌ನ ವಿಶೇಷವೇನೆಂದರೆ ಇದರಲ್ಲಿ ಸಾಕಷ್ಟು ಖಾಲಿ ಜಾಗಗಳೂ ಇದ್ದು, ಅದರ ಮೂಲಕ ಗ್ಯಾಸ್‌ ಮತ್ತು ಇತರೆ ರಾಸಾಯನಿಕಗಳನ್ನು ಸುಲಭವಾಗಿ ಹರಿಸಬಹುದಾಗಿದೆ. ಈ ಸಂರಚನೆ ಇದೀಗ ‘ಮೆಟಲ್‌ ಆರ್ಗ್ಯಾನಿಕ್‌ ಫ್ರೇಮ್‌ವರ್ಕ್‌’ ಆಗಿ ಕರೆಯಲ್ಪಟ್ಟಿದೆ. ಇದನ್ನು ನಾವು ‘ಅಣು ಆರ್ಕಿಟೆಕ್ಚರ್‌’ ಎಂದೂ ಕರೆಯಬಹುದಾಗಿದೆ. ಪರಮಾಣು ಮತ್ತು ಅಣುಗಳನ್ನು ಇಟ್ಟಿಗೆಗಳ ರೀತಿ ಬಳಸಿ ಈ ವಿಶೇಷವಾದ ಸಂರಚನೆ ನಿರ್ಮಿಸಲಾಗಿದೆ.

ಇದೀಗ ನೊಬೆಲ್‌ ಗೌರವಕ್ಕೆ ಪಾತ್ರವಾಗಿರುವ ರಾಬ್ಸನ್‌(88) ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್‌ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಿಟಾಗವಾ(74) ಅವರು ಜಪಾನಿನ ಕ್ಯೋಟೋ ವಿವಿಯಲ್ಲಿ ಹಾಗೂ ಯಾಗ್ಹಿ(60) ಅವರು ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂವರೂ ವಿಜ್ಞಾನಿಗಳು ಪ್ರತ್ಯೇಕವಾಗಿ ಸಂಶೋಧನೆ ನಡೆಸಿದರೂ ಪರಸ್ಪರರ ಸಂಶೋಧನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಮೂಲಕ 1989ರಲ್ಲಿ ಎಂಒಎಫ್‌ಗಳನ್ನು ಕಂಡುಹಿಡಿದು ರಸಾಯನ ಶಾಸ್ತ್ರ ಜಗತ್ತಿಗೆ ಹೊಸ ಬೆಳಕು ನೀಡಿದ್ದಾರೆ.

-

ಇಂದು ನೊಬೆಲ್‌ ಸಾಹಿತ್ಯ ಪ್ರಶಸ್ತಿ

ಸ್ಟಾಕ್‌ಹೋಮ್‌: ಗುರುವಾರ ನೊಬೆಲ್‌ ಸಾಹಿತ್ಯ ಪ್ರಶಸ್ತಿ, ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿ ಮತ್ತು ಸೋಮವಾರ ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆ ಆಗಲಿವೆ.