ಇಲ್ಲಿನ ಸೋಮನಾಥ ದೇವಾಲಯದ ಮೇಲೆ ಮಹಮ್ಮದ್‌ ಘಜ್ನಿ ದಾಳಿ ಮಾಡಿ 1,000 ವರ್ಷವಾದ ನಿಮಿತ್ತ ಹಮ್ಮಿಕೊಂಡ ‘ಶೌರ್ಯ ಯಾತ್ರೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಾಲ್ಗೊಂಡರು.

-ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ಮೋದಿ ಸಂಚಾರ-ಶಿವನ ಆಯುಧ ‘ಡಮರು’ ನುಡಿಸಿ ಗಮನ ಸೆಳೆದ ಪ್ರಧಾನಿ-108 ಕುದುರೆಗಳು ಹೆಜ್ಜೆ, ಕಲಾವಿದರಿಂದ ವಿಶೇಷವಾದ ನೃತ್ಯ-ಯಾತ್ರೆಯುದ್ದಕ್ಕೂ ಲಕ್ಷಾಂತರ ಸಂಖ್ಯೆಯ ಜನರಿಂದ ಸ್ವಾಗತ-ವೀರ ಹಮೀರಜಿ, ಸರ್ದಾರ್‌ ಪಟೇಲ್‌ ಪುತ್ಥಳಿಗೆ ಪುಷ್ಪನಮನ

ಸೋಮನಾಥ (ಗುಜರಾತ್‌): ಇಲ್ಲಿನ ಸೋಮನಾಥ ದೇವಾಲಯದ ಮೇಲೆ ಮಹಮ್ಮದ್‌ ಘಜ್ನಿ ದಾಳಿ ಮಾಡಿ 1,000 ವರ್ಷವಾದ ನಿಮಿತ್ತ ಹಮ್ಮಿಕೊಂಡ ‘ಶೌರ್ಯ ಯಾತ್ರೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಾಲ್ಗೊಂಡರು. ಸುಮಾರು 1 ಕಿ.ಮೀ. ದೂರದ ಯಾತ್ರೆಯುದ್ದಕ್ಕೂ ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ ಮೋದಿಯವರಿಗೆ ಅದ್ಧೂರಿ ಸ್ವಾಗತ ಕೋರಿದರು. ಈ ನಡುವೆ, ಸೋಮನಾಥನಿಗೆ ಅವರು ಪೂಜೆ ಕೂಡ ಸಲ್ಲಿಸಿದರು.

ಇಲ್ಲಿನ ಶಂಖ ವೃತ್ತದಿಂದ ವೀರ ಹಮೀರಜಿ ಗೋಹಿಲ್‌ ವೃತ್ತದ ವರೆಗೆ ಯಾತ್ರೆ ನಡೆಯಿತು. ವಿಶೇಷವಾಗಿ ವಿನ್ಯಾಸಗೊಳಿಸಿದ್ದ ವಾಹನದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಯಾದವ್‌ ಜೊತೆಯಲ್ಲಿ ನಿಂತಿದ್ದ ಪ್ರಧಾನಿ ಮೋದಿ ಜನಸ್ತೋಮದತ್ತ ಕೈ ಬೀಸುತ್ತಾ ಮುಂದೆ ಸಾಗಿದರು. ತರುಣ ಅರ್ಚಕರ ತಂಡ ಶಿವನ ಆಯುಧವಾದ ಡಮರುವನ್ನು ನುಡಿಸುತ್ತಾ ಮೋದಿಯವರ ವಾಹನದ ಜೊತೆಗೆ ಹೆಜ್ಜೆ ಹಾಕಿತು. ಈ ವೇಳೆ ಒಬ್ಬ ಅರ್ಚಕರಿಂದ 2 ಡಮರುವನ್ನು ಪಡೆದುಕೊಂಡ ಪ್ರಧಾನಿ ತಾವೇ ಅವುಗಳನ್ನು ನುಡಿಸಿ ಗಮನ ಸೆಳೆದರು. ಯಾತ್ರೆಯುದ್ದಕ್ಕೂ 108 ಕುದುರೆಗಳು ನಡೆದುಬಂದವು. ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದ ಕಲಾವಿದರು ಸಾಂಪ್ರದಾಯಿಕ ನೃತ್ಯಗಳನ್ನು ಮಾಡುತ್ತಾ ಮುಂದೆ ಸಾಗಿದರು.ಸ್ಮಾರಕಗಳಿಗೆ ಗೌರವ:

1299ರಲ್ಲಿ ದೆಹಲಿ ಸುಲ್ತಾನರ ಆಕ್ರಮಣದ ವಿರುದ್ಧ ಸೋಮನಾಥ ದೇವಾಲಯವನ್ನು ರಕ್ಷಿಸುವಾಗ ಪ್ರಾಣತ್ಯಾಗ ಮಾಡಿದ ಹಮೀರಜಿ ಗೋಹಿಲ್ ಅವರ ಪ್ರತಿಮೆಗೆ ಮೋದಿ ಪುಷ್ಪನಮನ ಸಲ್ಲಿಸಿದರು. ನಂತರ, 1951ರಲ್ಲಿ ದೇವಾಲಯವನ್ನು ಮರುಸ್ಥಾಪಿಸಿ ಅಧಿಕೃತವಾಗಿ ಬಾಗಿಲು ತೆರೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.