ಸಾರಾಂಶ
ನವದೆಹಲಿ: ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಕುರಿತಂತೆ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (39) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಘಟನೆ ನಡೆದು 4 ದಿನಗಳಾದರೂ ಈ ಕುರಿತು ಸ್ವಾತಿ ಅಧಿಕೃತ ದೂರು ನೀಡಿರಲಿಲ್ಲ. ಈ ನಡುವೆ ಗುರುವಾರ ಪೊಲೀಸರು ಸ್ವಾತಿ ಮನೆಗೆ ಆಗಮಿಸಿ ಹೇಳಿಕೆ ದಾಖಲಿಸಿಕೊಂಡರು.
ತೀವ್ರ ಹಲ್ಲೆ:
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ‘ನಾನು ಮುಖ್ಯಮಂತ್ರಿ ಅವರ ಭೇಟಿಗೆ ಹೋಗಿದ್ದಾಗ ಬಿಭವ್ ಅವಕಾಶ ನಿರಾಕರಿಸಿದರು. ಜೊತೆಗೆ ಏಕಪಕ್ಷೀಯವಾಗಿ ನನ್ನ ಮುಖ, ಹೊಟ್ಟೆ, ಎದೆ ಮತ್ತು ದೇಹದ ಸೂಕ್ಷ್ಮ ಭಾಗಗಳ ಮೇಲೂ ಹಲವು ಬಾರಿ ತೀವ್ರ ಹಲ್ಲೆ ನಡೆಸಿದರು. ಈ ವೇಳೆ ಅವರ ಬಳಿ ನಾನು ಗೋಗರೆದು ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದೆ’ ಎಂದು ಸ್ವಾತಿ ಹೇಳಿದ್ದಾರೆ.
ಈ ಆಧಾರದ ಮೇಲೆ ಪೊಲೀಸರು ಬಿಭವ್ ಮೇಲೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ, ಕ್ರಿಮಿನಲ್ ಉದ್ದೇಶ, ಉದ್ದೇಶಪೂರ್ವಕ ಹಲ್ಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.