ಸಾರಾಂಶ
ಡಮಾಸ್ಕಸ್: ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸಾದ್ ಪತನ ಹೊಂದಿದ 1 ದಿನ ಬಳಿಕವೂ ಬಂಡುಕೋರರ ನೇತೃತ್ವದಲ್ಲಿ ಯಾವುದೇ ಹೊಸ ಸರ್ಕಾರ ಸ್ಥಾಪನೆ ಆಗಿಲ್ಲ. ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಅವರು ಸದ್ಯಕ್ಕೆ ದೇಶದ ಉಸ್ತುವಾರಿ ಹೊತ್ತಿದ್ದು, ಅವರ ನೇತೃತ್ವದಲ್ಲೇ ಸರ್ಕಾರದ ಎಲ್ಲ ಕಾರ್ಯಕಲಾಪಗಳು ನಡೆಯುತ್ತಿವೆ.ಈ ನಡುವೆ ದಂಗೆಯ ನೇತೃತ್ವ ಹೊತ್ತಿದ್ದ ಅಲ್ ಖೈದಾ ಬೆಂಬಲಿತ ಬಂಡುಕೋರ ನಾಯಕ ಅಬು ಮೊಹಮ್ಮದ್ ಅಲ್ ಗೋಲಾನಿ ಆಪ್ತರು ಮಾತನಾಡಿ, ‘ಸಿರಿಯಾದಲ್ಲಿ ಜನಪ್ರತಿನಿಧಿಗಳನ್ನು ಹೊಂದಿದ ಹಾಗೂ ಧಾರ್ಮಿಕ ಸಹಿಷ್ಣು ಸರ್ಕಾರ ರಚನೆ ಆಗಲಿದೆ’ ಎಂದಿದ್ದಾರೆ.
ಅಲ್ಲದೆ, ಇತರ ಕೆಲವು ಇಸ್ಲಾಮಿಕ್ ದೇಶಗಳಂತೆ ಮಹಿಳೆಯರ ಉಡುಪಿನ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಧಾನಿ ಜಲಾಲಿ ಮಾತನಾಡಿ, ‘ಬಂಡುಕೋರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದ್ಯಕ್ಕೆ ಸರ್ಕಾರ ನಡೆಸುತ್ತಿದ್ದೇನೆ. ಸೋಮವಾರ ಸಿರಿಯಾ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ’ ಎಂದಿದ್ದಾರೆ.
ಸಿರಿಯಾದಲ್ಲಿದೆ ‘ನೆಹರು ಸ್ಟ್ರೀಟ್’!
ಡಮಾಸ್ಕಸ್: ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ನೆಹರು ಸ್ಟ್ರೀಟ್ ಎಂಬ ಬೀದಿ ಇದೆ ಎಂಬುದು ವಿಶೇಷ.1957ರಲ್ಲಿ ಅಮೆರಿಕಕ್ಕೆ ತೆರಳಿದ್ದ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಾರ್ಗ ಮಧ್ಯೆ ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಭೇಟಿ ನೀಡಿದ್ದರು. ಅಂದು ಭಾರತ ಹಾಗೂ ಸಿರಿಯಾ ದೇಶಗಳ ನಡುವೆ ಉತ್ತಮ ರಾಜತಾಂತ್ರಿಕ ಬಾಂಧವ್ಯವಿತ್ತು. ಇದರ ಪ್ರತೀಕವಾಗಿ, ಡಮಾಸ್ಕಸ್‌ನಲ್ಲಿದ್ದ ಐತಿಹಾಸಿಕ ಉಮ್ಮಾಯದ್ ಸ್ಕ್ವೇರ್‌ಗೆ ‘ಜವಾಹರಲಾಲ್ ನೆಹರು ಸ್ಟ್ರೀಟ್(ಬೀದಿ)’ ಎಂದು ಮರುನಾಮಕರಣ ಮಾಡಲಾಯಿತು.
ಆ ಬಳಿಕ ಉಭಯ ದೇಶಗಳ ಸಂಬಂಧ ರಾಜಕೀಯ ಸಮಸ್ಯೆಗಳು ಹಾಗೂ ಯುದ್ಧಕ್ಕೆ ಸಾಕ್ಷಿಯಾಗಿತ್ತು. ಇದೀಗ ಅಸಾದ್ ಸರ್ಕಾರದ ಪತನ, ಮುಂದಿನ ದಿನಗಳಲ್ಲಿ ಉಭಯ ದೇಶಗಳ ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಅಸಾದ್‌ರ ಗ್ಯಾರೇಜಲ್ಲಿ ಫೆರಾರಿ ಸೇರಿ ‘ದುಬಾರಿ ಕಾರುಬಾರು’
ಡಮಾಸ್ಕಸ್: ಸಿರಿಯಾ ಅಧ್ಯಕ್ಷರಾಗಿದ್ದ ಬಷರ್ ಅಲ್ ಅಸಾದ್ ದೇಶ ತೊರೆದು ರಷ್ಯಾದಲ್ಲಿ ಆಶ್ರಯ ಪಡೆಯುತ್ತಿದ್ದಂತೆ, ಡಮಾಸ್ಕಸ್‌ನಲ್ಲಿರುವ ಅವರ ನಿವಾಸ ಬಂಡುಕೋರರ ವಶವಾಗಿದೆ. ಈ ವೇಳೆ ಅಸಾದ್‌ರ ವೈಯಕ್ತಿಕ ಗ್ಯಾರೇಜ್ ಪ್ರವೇಶಿಸಿದ ದಂಗೆಕೋರರಿಗೆ ನೂರಾರು ದುಬಾರಿ ಕಾರುಗಳ ‘ದರ್ಶನ’ವಾಗಿದೆ.ಈ ಕುರಿತ ವಿಡಿಯೋಗಳು ಹರಿದಾಡುತ್ತಿದ್ದು, ಗ್ಯಾರೇಜ್‌ನಲ್ಲಿ ಮರ್ಸಿಡಿಸ್, ಪೋರ್ಶ್, ಆಡಿ, ಫೆರಾರಿ, ಆಸ್ಟನ್ ಮಾರ್ಟಿನ್ಸ್, ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಹಲವಾರು ಕಾರುಗಳನ್ನು ಇದ್ದುದನ್ನು ಕಾಣಬಹುದಾಗಿದೆ. ಗ್ಯಾರೇಜ್‌ನ ಮುಂಭಾಗದಲ್ಲಿರುವ ಬೃಹತ್ ಪಾರ್ಕಿಂಗ್ ಸ್ಥಳದಲ್ಲಿ ಜನ ಈ ಕಾರುಗಳು ರಾಜಾರೋಷದಿಂದ ಚಲಾಯಿಸಿದ ಘಟನೆಗಳೂ ನಡೆದಿವು.
ಅತ್ತ ಅಧ್ಯಕ್ಷರ ನಿವಾಸದಲ್ಲೂ ಜನರ ರಂಪಾಟ ಜೋರಾಗಿದ್ದು, ಹಲವರು ಅಲ್ಲಿರುವ ಕುರ್ಚಿ, ಮೇಜು, ಕಪಾಟುಗಳಂತಹ ವಸ್ತುಗಳನ್ನು ಹೊತ್ತೊಯ್ಯುವುದನ್ನೂ ಕಾಣಬಹುದಾಗಿದೆ.
ಅಸಾದ್‌ಗೆ ಆಶ್ರಯ: ರಷ್ಯಾ ಅಧಿಕೃತ ಘೋಷಣೆ
ಮಾಸ್ಕೋ: ದೇಶ ಬಿಟ್ಟು ಪಲಾಯನ ಮಾಡಿರುವ ಸಿರಿಯಾದ ಪದಚ್ಯುತ ಅಧ್ಯಕ್ಷ ಬಷರ್ ಅಸಾದ್‌ಗೆ ರಾಜಕೀಯ ಆಶ್ರಯ ನೀಡಿರುವುದಾಗಿ ರಷ್ಯಾ ಸೋಮವಾರ ಅಧಿಕೃತವಾಗಿ ಘೋಷಿಸಿದೆ.ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಷ್ಯಾ ಅಧ್ಯಕ್ಷರ ನಿವಾಸ ಕ್ರೆಮ್ಲಿನ್‌ನ ವಕ್ತಾರ ಡೆಮಿಟ್ರಿ ಪೆಸ್ಕೋವ್, ‘ಅಸಾದ್‌ಗೆ ಆಶ್ರಯ ಒದಗಿಸುವ ಬಗ್ಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈಯಕ್ತಿಕವಾಗಿ ನಿರ್ಣಯಿಸಿದ್ದಾರೆ. ಆದರೆ ಅವರಿಗೆ ಅಸಾದ್‌ರನ್ನು ಭೇಟಿಯಾಗುವ ಯೋಚನೆಯಿಲ್ಲ’ ಎಂದಿದ್ದಾರೆ.ಆದರೆ ಅಸಾದ್ ಇರುವ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಸಿರಿಯಾ ಸಾರ್ವಭೌಮತೆ ಕಾಪಾಡಿ: ಭಾರತ ಮನವಿ
ಸಿರಿಯಾದಲ್ಲಿ ಇಸ್ಲಾಮಿಸ್ಟ್ ಬಂಡುಕೋರರು ಅಧಿಕಾರವನ್ನು ತಮ್ಮ ಕೈಗೆತ್ತಿಕೊಂಡ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಭಾರತ, ‘ದೇಶದಲ್ಲಿ ಸ್ಥಿರತೆ ಸ್ಥಾಪಿಸಲು ಶಾಂತಿಯುತ ಹಾಗೂ ಎಲ್ಲರನ್ನೂ ಒಳಗೊಂಡ ರಾಜಕೀಯ ವ್ಯವಸ್ಥೆ ಅಗತ್ಯ’ ಎಂದು ಹೇಳಿದೆ.
ಸಿರಿಯಾ ಅಧ್ಯಕ್ಷ ಅಸಾದ್ ಮಹಾಪತನದ ಬಗ್ಗೆ ಸೋಮವಾರ ಹೇಳಿಕೆ ನೀಡದ ಭಾರತೀಯ ವಿದೇಶಾಂಗ ಇಲಾಖೆ, ‘ಸಿರಿಯಾದ ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಲು ಎಲ್ಲರೂ ಒಂದಾಗುವ ಅವಶ್ಯಕತೆಯಿದೆ. ಸಿರಿಯಾ ಸಮಾಜದ ಎಲ್ಲಾ ವರ್ಗಗಳ ಆಸೆ ಹಾಗೂ ಆಸಕ್ತಿಗಳನ್ನು ಪರಿಗಣಿಸುವ, ಎಲ್ಲರನ್ನೂ ಒಳಗೊಂಡ ರಾಜಕೀಯ ವ್ಯವಸ್ಥೆಯನ್ನು ನಾವು ಪ್ರತಿಪಾದಿಸುತ್ತೇವೆ’ ಎಂದಿದೆ.
ಅಂತೆಯೇ, ಡಮಾಸ್ಕಸ್‌ನಲ್ಲಿರುವ ಭಾರತೀಯ ದೂತಾವಾಸವು ಅಲ್ಲಿನ ಭಾರತೀಯರೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ.