ಸಾರಾಂಶ
ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡಿನ ಮೆಟ್ಟೂರಿನಲ್ಲಿ ಕಟ್ಟಿರುವ ಅಣೆಕಟ್ಟೆಗೆ ಕರ್ನಾಟಕದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಅಣೆಕಟ್ಟೆ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ತಮಿಳುನಾಡು ಸರ್ಕಾರ ಅಣೆಕಟ್ಟೆಯಿಂದ ನದಿ ಹಾಗೂ ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಭಾನುವಾರ ಆದೇಶಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ದುರೈಮುರುಗನ್ ಹಾಗೂ ಇತರರು ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ನೀರು ಬಿಡುವಂತೆ ಸೂಚಿಸಲಾಯಿತು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕರ್ನಾಟಕವು 1.48 ಲಕ್ಷ ಕ್ಯುಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ 120 ಅಡಿ ಎತ್ತರದ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 109.20 ಅಡಿಗೆ ಏರಿದ್ದು, ಅಣೆಕಟ್ಟು ತುಂಬಲು ಕೇವಲ 11 ಅಡಿಗಳಷ್ಟೇ ಬಾಕಿ ಇದೆ. ಆದ್ದರಿಂದ ಮೆಟ್ಟೂರು ಜಲಾಶಯದಿಂದ ತಕ್ಷಣವೇ ನೀರನ್ನು ಹರಿಬಿಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದರು.
ಮೆಟ್ಟೂರು ಅಣೆಕಟ್ಟೆ ಬಹುತೇಕ ಭರ್ತಿ ಆಗುತ್ತಿರುವ ಕಾರಣ ಇನ್ನೊಂದು ವರ್ಷ ಕಾವೇರಿ ಸಮಸ್ಯೆ ಉದ್ಭವಿಸದು ಎಂದು ಆಶಿಸಲಾಗಿದೆ.