ಸಾರಾಂಶ
ಚೆನ್ನೈ: ಗೂಳಿಗಳನ್ನು ಓಡಿಸುವ ಸಾಂಪ್ರಾದಾಯಿಕ ಆಟವಾದ ಜಲ್ಲಿಕಟ್ಟು ಕ್ರೀಡೆಗೆ ಕಳೆದ ವರ್ಷ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಆಟಕ್ಕೆ ಕಾರ್ಪೊರೆಟ್ ಟಚ್ ನೀಡಿ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ಆಡಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.
ಇದಕ್ಕೆ ನೆರವಾಗಬಹುದಾದಂಥ ರಾಜ್ಯದ ಮೊದಲ ಅತ್ಯಾಧುನಿಕ ಕ್ರೀಡಾಂಗಣವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬುಧವಾರ ಉದ್ಘಾಟಿಸಿದ್ದಾರೆ.
ಮದುರೈನ ಅಲಂಗಾನಲ್ಲೂರ್‌ನಲ್ಲಿ 66.8 ಎಕರೆ ವಿಸ್ತೀರ್ಣದಲ್ಲಿ ನೂತನ ಜಲ್ಲಿಕಟ್ಟು ಕ್ರೀಡಾಂಗಣ ನಿರ್ಮಿಸಲಾಗಿದೆ. ಇದರಲ್ಲಿ 5 ಸಾವಿರ ಮಂದಿ ಕೂರುವ ವ್ಯವಸ್ಥೆ ಇದ್ದು, ಜಲ್ಲಿಕಟ್ಟು ಕ್ರೀಡೆಯ ಮಹತ್ವವನ್ನು ತಿಳಿಸುವ ವಸ್ತುಸಂಗ್ರಹಾಲಯವನ್ನು ಸಹ ಹೊಂದಿದೆ.
ಇದಲ್ಲದೆ ಗೂಳಿಗಳು ಗಾಯಗೊಂಡರೆ ಅವುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಸೇರಿದಂತೆ ಹಲವಾರು ಆಧುನಿಕ ಸೌಲಭ್ಯಗಳನ್ನು ಕ್ರೀಡಾಂಗಣ ಹೊಂದಿದೆ.
ಐಪಿಎಲ್ ಸ್ಪರ್ಶ: ಜಲ್ಲಿಕಟ್ಟು ಈಗಾಗಲೇ ತಮಿಳುನಾಡಿನಲ್ಲಿ ಬಹುಜನಪ್ರಿಯ ಕ್ರೀಡೆಯಾದರೂ ಅದಕ್ಕೆ ಆಧುನಿಕತೆ ಸ್ಪರ್ಶ ನೀಡಲು ತಮಿಳುನಾಡು ಸರ್ಕಾರ ಮತ್ತು ಕೆಲ ಜಲ್ಲಿಕಟ್ಟು ಆಯೋಜಿಸುವ ಸಂಘಟನೆಗಳು ಮುಂದಾಗಿವೆ.
ಈ ಮೂಲಕ ಉದ್ಯಮಗಳನ್ನೂ ಈ ಕ್ರೀಡೆಯತ್ತ ಸೆಳೆಯುವ, ಕ್ರೀಡೆಯನ್ನು ಪ್ರವಾಸೋದ್ಯಮದ ಭಾಗ ಮಾಡುವ, ಗೆದ್ದವರಿಗೆ ಚಿನ್ನ, ಬೈಕ್, ಕಾರಿನ ಜೊತೆಗೆ ಇನ್ನೂ ಹೆಚ್ಚಿನ ಮೊತ್ತ ಬಹುಮಾನ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ.
ರಾಜ್ಯದಲ್ಲಿ ಈಗಾಗಲೇ ಇರುವ ಜಲ್ಲಿಕಟ್ಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಹೊಸ ಮಾದರಿಯ ಪಂದ್ಯಾವಳಿಯನ್ನು ಮಾತ್ರ ಹೊಸ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ.
ಚಿನ್ನದ ನಾಣ್ಯಗಳು, ಬೈಕ್ ಮತ್ತು ಕಾರ್‌ಗಳನ್ನು ಬಹುಮಾನವಾಗಿ ವಿತರಿಸಲಾಗುತ್ತದೆ ಎನ್ನಲಾಗಿದೆ. ಈ ಪಂದ್ಯಾವಳಿಯಲ್ಲಿ 17 ಜಿಲ್ಲೆಗಳ 500ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ.
ಕ್ರೀಡಾಕೂಟದ ಮಾದರಿ, ಆರಂಭ ದಿನಾಂಕ ಸೇರಿದಂತೆ ಕ್ರೀಡಾಕೂಟದ ವಿವರಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.