ನೂತನ ಕ್ರಿಮಿನಲ್‌ ಕಾಯ್ದೆಗಳ ‘ಹಿಂದಿ’ ಹೆಸರು ಹೇಳಲ್ಲ: ತಮಿಳುನಾಡು ಜಡ್ಜ್‌!

| Published : Jan 25 2024, 02:06 AM IST

ನೂತನ ಕ್ರಿಮಿನಲ್‌ ಕಾಯ್ದೆಗಳ ‘ಹಿಂದಿ’ ಹೆಸರು ಹೇಳಲ್ಲ: ತಮಿಳುನಾಡು ಜಡ್ಜ್‌!
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಹಿಂದಿ ಗೊತ್ತಿಲ್ಲ, ಕಾಯ್ದೆಗಳ ಹಳೇ ಇಂಗ್ಲಿಷ್‌ ಹೆಸರೇ ಹೇಳುವೆ ಎಂದು ಮದ್ರಾಸ್‌ ಹೈಕೋರ್ಟ್‌ನ ನ್ಯಾ। ಅನಂದ್‌ ಕೋರ್ಟ್‌ ಹಾಲ್‌ನಲ್ಲೇ ಹೇಳಿದ ಪ್ರಸಂಗ ನಡೆದಿದೆ.

ಚೆನ್ನೈ: ಇತ್ತೀಚೆಗೆ ಕೇಂದ್ರ ಸರ್ಕಾರವು ಐಪಿಸಿ, ಸಿಆರ್‌ಪಿಸಿ ಹಾಗೂ ಎವಿಡೆನ್ಸ್‌ ಆ್ಯಕ್ಟ್‌ಗಳ ಹಲವಾರು ಅಂಶಗಳನ್ನು ಬದಲಿಸಿ, ಅವುಗಳಿಗೆ ಹಿಂದಿ ನಾಮಕರಣ ಮಾಡಿ ನೂತನ 3 ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದರ ವೇಳೆ ನ್ಯಾಯಾಧೀಶರೊಬ್ಬರು, ಈ ಹಿಂದಿ ಹೆಸರುಗಳನ್ನು ಹೇಳಲು ನಿರಾಕರಿಸಿದ ಪ್ರಸಂಗ ನಡೆದಿದೆ.ಮಂಗಳವಾರ ಕಲಾಪದಲ್ಲಿ ಹಿಂದಿ ಹೆಸರುಳ್ಳ 3 ಕಾನೂನು (ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಾ) ಬಗ್ಗೆ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ। ಎನ್. ಆನಂದ್ ವೆಂಕಟೇಶ್, ‘ಎಲ್ಲ 3 ಕಾಯ್ದೆಗಳನ್ನು ಹಿಂದಿನ ಇಂಗ್ಲಿಷ್‌ ಭಾಷೆಯಲ್ಲೇ ಉಚ್ಚರಿಸುವೆ. ಐಪಿಸಿಯನ್ನು ಐಪಿಸಿ ಎಂದೇ ಕರೆಯುವೆ. ಏಕೆಂದರೆ ನನಗೆ ಅದು (ಹಿಂದಿ) ತಿಳಿಯದ ಭಾಷೆಯಾಗಿದೆ’ ಎಂದರು.ಇನ್ನು ಸಹಾಯಕ ಅಭಿಯೋಜಕ ಎ. ದಾಮೋದರನ್‌ ‘ಹೊಸ ಕಾಯ್ದೆ’ ಎಂದಷ್ಟೇ ಹೇಳಿದರು. ಆಗ ನ್ಯಾ। ವೆಂಕಟೇಶ್‌, ‘ಹೊಸ ಕಾಯ್ದೆಯ ಹೆಸರು ಹೇಳಿ’ ಎಂದು ದಾಮೋದರನ್‌ಗೆ ಸೂಚಿಸಿದರು. ಈ ವೇಳೆ ದಾಮೋದರನ್‌ಗೆ ಹಿಂದಿ ಉಚ್ಚರಿಸಲು ಕಷ್ಟವಾಯಿತು. ‘ಹಿಂದಿ ಉಚ್ಚಾರ ಕಷ್ಟ ಎಂದು ಕೇವಲ ‘ಹೊಸ ಕಾಯ್ದೆ’ ಎಂದಷ್ಟೇ ಹೇಳಿ ದಾಮೋದರನ್‌ ಜಾಣತನ ಮೆರದಿದ್ದಾರೆ’ ಎಂದು ಚಟಾಕಿ ಹಾರಿಸಿದರು.

ಕಾಯ್ದೆಯ ಹಿಂದಿ ಹೆಸರುಗಳಿಗೆ ತಮಿಳುನಾಡಿನ ರಾಜಕೀಯ ಪಕ್ಷಗಳೂ ಈ ಹಿಂದೆ ವಿರೋಧಿಸಿದ್ದವು.