ಮಾಜಿ ರಾಜ್ಯಪಾಲೆ ತಮಿಳ್‌ಸಾಯ್‌ ಕೈಹಿಡಿಯುತ್ತಾ ಅದೃಷ್ಟ?

| Published : Mar 31 2024, 02:05 AM IST

ಸಾರಾಂಶ

ಡಿಎಂಕೆ ಭದ್ರಕೋಟೆ ಚೆನ್ನೈ ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತಮಿಳ್‌ಸಾಯ್‌ ಈ ಬಾರಿ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ.

ಚೆನ್ನೈ: ಈವರೆಗೆ ನಡೆದ 16 ಚುನಾವಣೆಗಳಲ್ಲಿ 9 ಬಾರಿ ಡಿಎಂಕೆ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ತಮಿಳುನಾಡು ರಾಜಧಾನಿ ಚೆನ್ನೈ ವ್ಯಾಪ್ತಿಗೆ ಬರುವ ‘ಚೆನ್ನೈ ದಕ್ಷಿಣ’ ಲೋಕಸಭಾ ಕ್ಷೇತ್ರ ಈ ಬಾರಿ ವಿಶೇಷ ಕಾರಣಕ್ಕೆ ಮತ್ತಷ್ಟು ರಂಗೇರಿದೆ. ಈ ಬಾರಿ ಇಲ್ಲಿ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್‌ಸಾಯ್‌ ಸೌಂದರ್ಯರಾಜನ್‌ ಕಣಕ್ಕೆ ಇಳಿದಿರುವ ಕಾರಣ ಚುನಾವಣೆಯ ಕಾವು ಹೆಚ್ಚಿದೆ.ಚೆನ್ನೈ ದಕ್ಷಿಣದಲ್ಲಿ ತಮಿಳ್‌ಸಾಯ್‌ಗೆ ಹಾಲಿ ಡಿಎಂಕೆ ಸಂಸದೆ ತಮಿಳಚ್ಚಿ ಥಂಗಪಾಂಡಿಯನ್‌ ಅಲಿಯಾಸ್‌ ಸುಮತಿ, ಎಐಎಡಿಎಂಕೆ ಅಭ್ಯರ್ಥಿ ಜಯವರ್ಧನ, ನಾಮ್‌ ತಮಿಳರ್‌ ಕಟ್ಚಿ ಪಕ್ಷದ ತಮಿಳ್‌ಸೆಲ್ವಿ ಸ್ಪರ್ಧೆ ನೀಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಸುಮತಿ ಅವರು ಎಐಎಡಿಎಂಕೆಯ ಜಯವರ್ಧನೆ ಅವರನ್ನು 2.62 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.2014ರ ಅಂಕಿ ಅಂಶಗಳ ಅನ್ವಯ ಕ್ಷೇತ್ರದ ವ್ಯಾಪ್ತಿಯ ಮತದಾರರ ಸಂಖ್ಯೆ 21 ಲಕ್ಷದಷ್ಟಿತ್ತು. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅವುಗಳೆಂದರೆ ವಿರುಗಂಪಕ್ಕಂ, ಸೈದಲ್‌ಪೇಟ್‌, ಥೈಗರಾಯನಗರ್‌, ಮೈಲಾಪೋರ್‌, ವೆಲಾಚೆರಿ ಮತ್ತು ಶೋಜಿಂಗನಲ್ಲೂರು. ಈ 6 ಕ್ಷೇತ್ರಗಳ ಪೈಕಿ 5ರಲ್ಲಿ ಡಿಎಂಕೆ ಅಭ್ಯರ್ಥಿಗಳು ಮತ್ತು ಒಂದರಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಗೆದ್ದಿದ್ದಾರೆ.ಬಲಾಬಲ: 1957-2019ರ ಅವಧಿಯಲ್ಲಿ ನಡೆದ 16 ಚುನಾವಣೆಗಳಲ್ಲಿ 9 ಬಾರಿ ಡಿಎಂಕೆ, 4 ಬಾರಿ ಕಾಂಗ್ರೆಸ್‌, ಎಐಎಡಿಎಂಕೆ 3 ಬಾರಿ ಕ್ಷೇತ್ರವನ್ನು ಕೈವಶ ಮಾಡಿಕೊಂಡಿವೆ.

ಸಮಸ್ಯೆಗಳು: ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಐಟಿ ಕಂಪನಿಗಳ ತಾಣವಾಗಿರುವ ಈ ಪ್ರದೇಶ ಕಳೆದ ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಪ್ರವಾಹ ಸ್ಥಿತಿ ಅನುಭವಿಸುತ್ತಿದೆ. ಜೋರಾಗಿ ಮಳೆ ಸುರಿದರೆ ಇಡೀ ಪ್ರದೇಶ ಕೆರೆ, ನದಿಯಂತೆ ಆಗುತ್ತದೆ. ಇದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್‌ ಪೂರೈಕೆಯಲ್ಲಿನ ವ್ಯತ್ಯಯ ಜನರ ಇನ್ನೊಂದು ದೊಡ್ಡ ಸಮಸ್ಯೆ. ಇದರ ಜೊತೆಗೆ ಗುಂಡಿಬಿದ್ದ, ದುರಸ್ತಿಯಾಗದ ರಸ್ತೆಗಳು, ಮೂಲಸೌಕರ್ಯ ಕೊರತೆ ಕ್ಷೇತ್ರದ ಪ್ರಮುಖ ಸಮಸ್ಯೆಯಾಗಿ ಕಾಣಿಸಿಕೊಂಡಿದೆ.ತಮಿಳ್‌ಸಾಯ್‌:

ತಮಿಳುನಾಡಿನಲ್ಲಿ ಬಿಜೆಪಿಯ ವಿವಿಧ ಹುದ್ದೆ ಅಲಂಕರಿಸಿದ್ದ ತಮಿಳ್‌ಸಾಯ್‌ 2019ರಲ್ಲಿ ತೂತ್ತುಕುಡಿಯಲ್ಲಿ ಡಿಎಂಕೆ ನಾಯಕಿ ಕನಿಮೋಳಿ ವಿರುದ್ಧ ಸೋಲು ಕಂಡಿದ್ದರು. ಅದಕ್ಕೆ ಮುನ್ನ ಎರಡು ವಿಧಾನಸಭಾ ಚುನಾವಣೆಗಳಲ್ಲೂ ಸ್ಪರ್ಧಿಸಿ ಕಂಡಿದ್ದರು. ಈ ನಡುವೆ 2019ರಲ್ಲಿ ಇವರನ್ನು ತೆಲಂಗಾಣದ ರಾಜ್ಯಪಾಲರಾಗಿ ನೇಮಿಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಮರಳಿ ಬಿಜೆಪಿ ಸೇರಿರುವ ತಮಿಳ್‌ಸಾಯ್‌ ಅವರಿಗೆ ಚೆನ್ನೈ ದಕ್ಷಿಣ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.ಬಿಜೆಪಿ ಅಲೆ ಹೇಗಿದೆ:

ಕಳೆದ ಬಾರಿ ಎಐಎಡಿಎಂಕೆ ಜೊತ ಮೈತ್ರಿ ಹೊಂದಿದ್ದ ಬಿಜೆಪಿ ಈ ಬಾರಿ ಆ ಪಕ್ಷದಿಂದ ದೂರವಾಗಿದೆ. ಪ್ರಮುಖ ದ್ರಾವಿಡ ಪಕ್ಷಗಳ ನೆರವಿನಿಂದ ಹೊರಬಂದು ರಾಜ್ಯದಲ್ಲಿ ಬೇರೂರುವ ಯತ್ನ ಮಾಡುತ್ತಿರುವ ಬಿಜೆಪಿ, ಈ ನಿಟ್ಟಿನಲ್ಲಿ ಟಿಟಿವಿ ದಿನಕರನ್‌ ಅವರ ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ, ರಾಮದಾಸ್‌ ನೇತೃತ್ವದ ಪಟ್ಟಾಳಿ ಮಕ್ಕಳ್‌ ಕಟ್ಚಿ ಜೊತೆ ಮೈತ್ರಿ ಮಾಡಿಕೊಂಡಿದೆ.ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಗಳು, ಪ್ರಧಾನಿ ಮೋದಿ ಅವರ ಜನಪ್ರಿಯತೆಯ ಅಲೆ ಈ ಬಾರಿ ತಮ್ಮ ಕೈಹಿಡಿಯಲಿದೆ ಎಂಬುದು ಬಿಜೆಪಿ ಮತ್ತು ತಮಿಳ್‌ಸಾಯ್‌ ಅವರ ಲೆಕ್ಕಾಚಾರ.ತಮಿಳ್‌ಸಾಯ್‌ ಹೇಳೋದೇನು?

ರಾಜ್ಯ ಮತ್ತು ಕ್ಷೇತ್ರದ ಜನತೆ ದೇಶದ ಪ್ರಧಾನಿಯಾಗಿ ಮತ್ತೆ ಮೋದಿ ಅವರನ್ನು ಬಯಸಿದ್ದಾರೆ. ಜೊತೆಗೆ ಕ್ಷೇತ್ರದ ಮತದಾರರು ಉತ್ತಮ ಜನಪ್ರತಿನಿಧಿಯನ್ನು ಬಯಸುತ್ತಿದ್ದಾರೆ. ಹೀಗಾಗಿ ನಾನು ಆ ಜನಪ್ರತಿನಿಧಿ ಆಗಬಯಸಿದ್ದೇನೆ. ಹಿಂದಿನ ಸಂಸದರು ಜನರ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಆದರೆ ನಾನು ಜನರ ನೇರ ಸಂಪಕರ್ದಲ್ಲಿ ಇರುವೆ. ಮಾದರಿ ಲೋಕಸಭಾ ಕ್ಷೇತ್ರ ರಚಿಸುವೆ ಎಂಬ ಭರವಸೆಯನ್ನು ತಮಿಳ್‌ಸಾಯ್‌ ನೀಡುತ್ತಿದ್ದಾರೆ.