ಸಾರಾಂಶ
ಮುಂಬೈ: ಒಮ್ಮೆ ಕ್ಯಾನ್ಸರ್‌ಗೆ ತುತ್ತಾದವರು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಟಾಟಾ ಇನ್‌ಸ್ಟಿಟ್ಯೂಟ್ ಮಾತ್ರೆಯೊಂದನ್ನು ಅಭಿವೃದ್ಧಿ ಪಡಿಸಿದೆ. ಈ ಮಾತ್ರೆಯ ಬೆಲೆ ಕೇವಲ 100 ರು. ಎಂದು ಸಂಸ್ಥೆ ತಿಳಿಸಿದೆ. ಕ್ಯಾನ್ಸರ್‌ಗೆ ತುತ್ತಾದವರು ರೇಡಿಯೇಶನ್ ಚಿಕಿತ್ಸೆಗೆ ಒಳಗಾದ ಬಳಿಕ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳನ್ನು ಸೇರಿ ಅವುಗಳು ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡುತ್ತಿದ್ದವು. ಆದರೆ ಈ ಮಾತ್ರೆ ತೆಗೆದುಕೊಳ್ಳುವುದರಿಂದ ಚಿಕಿತ್ಸೆಯ ಬಳಿಕ ವಿಘಟನೆಗೊಂಡ ಕ್ಯಾನ್ಸರ್ ಕೋಶಗಳು ನಾಶವಾಗಲಿವೆ. ಹೀಗಾಗಿ ರೋಗಿಯು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದು ತಪ್ಪಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ. ಪ್ರಯೋಗ ನಡೆಸಿದ್ದು ಹೇಗೆ?:ಇದರ ಪ್ರಯೋಗಕ್ಕಾಗಿ ಇಲಿಗಳನ್ನು ಬಳಸಿಕೊಂಡಿದ್ದು, ಇಲಿಗಳಿಗೆ ಮೊದಲಿಗೆ ಕ್ಯಾನ್ಸರ್ ಕೋಶಗಳನ್ನು ಒಳಸೇರಿಸಿ ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡಲಾಯಿತು. ಬಳಿಕ ರೇಡಿಯೇಶನ್ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸಿ, ಕೆಲವು ಇಲಿಗಳಿಗೆ ಈ ಮಾತ್ರೆ ತಿನ್ನಿಸಲಾಗಿದೆ. ಮಾತ್ರೆ ತಿಂದ ಇಲಿಗಳಲ್ಲಿ 2ನೇ ಬಾರಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಪ್ರಮಾಣ ಮಾತ್ರೆ ತಿನ್ನದ ಇಲಿಗಳಿಗಿಂತ ಕಡಿಮೆ ಇದೆ ಎಂದು ಪ್ರಯೋಗ ನಡೆಸಿದ ವಿಜ್ಞಾನಿಗಳು ತಿಳಿಸಿದ್ದಾರೆ. 1 ದಶಕದ ಪ್ರಯೋಗ:ಈ ಮಾತ್ರೆಯನ್ನು ಅಭಿವೃದ್ಧಿಪಡಿಸಲು ಟಾಟಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸುಮಾರು 1 ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷ, ಕೋಟಿ ರು. ಖರ್ಚಾಗುತ್ತದೆ. ಆದರೆ ಈ ಮಾತ್ರೆ ಕೇವಲ 100 ರು.ಗೆ ಲಭ್ಯವಿದ್ದು, ಜನರಿಗೆ ನೆರವಾಗಲಿದೆ. ಇದು ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂಬುದು ಸಹ ಪ್ರಯೋಗಗಳಿಂದ ದೃಢಪಟ್ಟಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಡಿಜಿಸಿಎ ಅನುಮತಿ ನೀಡುವುದು ಬಾಕಿ ಇದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.