ಸಾರಾಂಶ
ನೊಯೆಲ್ ಟಾಟಾ ವಿರುದ್ಧ ನಿಂತ ಮಿಸ್ತ್ರಿ ಬಣ
ಟಾಟಾ ಸನ್ಸ್ ಅಧಿಕಾರ ನಿಯಂತ್ರಣಕ್ಕಾಗಿ ಗುದ್ದಾಟನಿರ್ದೇಶಕ ಮಂಡಳಿಗೆ ನೇಮಕ ಮಾಡುವ ಬಗ್ಗೆ ಜಟಾಪಟಿ
ಕೇಂದ್ರದ ಮಧ್ಯಪ್ರವೇಶ, ಭಿನ್ನಮತ ಬಗೆಹರಿಸಲು ಸಲಹೆನವದೆಹಲಿ: 156 ವರ್ಷಗಳಷ್ಟು ಹಳೆಯ, ದೇಶದ ಅತಿದೊಡ್ಡ ಹಾಗೂ ಹಳೆಯ ಕಾರ್ಪೊರೇಟ್ ಕಂಪನಿಗಳಲ್ಲೊಂದಾದ ಟಾಟಾ ಸಮೂಹದಲ್ಲಿ ಇದೀಗ ಅಧಿಕಾರದ ಕಿತ್ತಾಟ ಆರಂಭವಾಗಿದೆ. ಟಾಟಾ ಸಮೂಹದ ಆಡಳಿತ ನಿಯಂತ್ರಿಸುವ ಮಾತೃಸಂಸ್ಥೆಯಾದ ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಗೆ ನಿರ್ದೇಶಕರನ್ನು ನೇಮಿಸುವ ವಿಚಾರದಲ್ಲಿ ಟಾಟಾ ಟ್ರಸ್ಟ್‌ನಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ.ರತನ್ ಟಾಟಾ ಅವರ ಉತ್ತರಾಧಿಕಾರಿ, ಟಾಟಾ ಟ್ರಸ್ಟ್ ಮುಖ್ಯಸ್ಥರಾದ ನೊಯೆಲ್ ಟಾಟಾ ವಿರುದ್ಧ ಮೆಹ್ಲಿ ಮಿಸ್ತ್ರಿ, ಇತರರು ಸೆಡ್ಡು ಹೊಡೆದಿದ್ದು, ಅವರ ಪ್ರಮುಖ ನಿರ್ಧಾರಗಳನ್ನು ಪ್ರಶ್ನಿಸಲು ಆರಂಭಿಸಿದ್ದಾರೆ.
ಟಾಟಾ ಗ್ರೂಪ್‌ನ ಮಾತೃ ಸಂಸ್ಥೆಯಾದ ಟಾಟಾ ಸನ್ಸ್‌ನಲ್ಲಿ ಟಾಟಾ ಟ್ರಸ್ಟ್ ಶೇ.66ರಷ್ಟು ಷೇರು ಹೊಂದಿದೆ. ಟಾಟಾ ಟ್ರಸ್ಟ್ ದಾನ ಧರ್ಮಗಳನ್ನು ನಿರ್ವಹಿಸುವ ಕಾರ್ಯ ನಡೆಸುತ್ತದೆಯಾದರೂ ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಯನ್ನು ನೇಮಿಸುವ ಅಧಿಕಾರ ಹೊಂದಿದೆ. ಇನ್ನು ಟಾಟಾ ಸನ್ಸ್ ಸಂಸ್ಥೆ, ಟಾಟಾ ಗ್ರೂಪ್‌ನ 400ಕ್ಕೂ ಹೆಚ್ಚು ಕಂಪನಿಗಳ ಮ್ಯಾನೇಜ್‌ಮೆಂಟ್ ನಿರ್ವಹಿಸುತ್ತದೆ.ಇದೀಗ ಟಾಟಾ ಟ್ರಸ್ಟ್‌ನ ನಾಲ್ವರು ಟ್ರಸ್ಟಿಗಳಾದ ಡೇರಿಯಸ್ ಖಂಬಾಟಾ, ಜೆಹಾಂಗೀರ್ ಎಚ್.ಸಿ. ಜೆಹಾಂಗೀರ್, ಪ್ರಮಿತ್ ಝವೇರಿ ಮ್ತು ಮೆಹ್ಲಿ ಮಿಸ್ತ್ರಿ ಅವರು, ‘ಸೂಪರ್ ನಿರ್ದೇಶಕ ಮಂಡಳಿ’ ರೀತಿ ವರ್ತಿಸಿ ಟಾಟಾ ಸನ್ಸ್‌ನ ಪ್ರಮುಖ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ವರ್ತಿಸಿದ ಆರೋಪ ಕೇಳಿಬಂದಿದೆ.
ಯಾವಾಗ ಶುರು?:ಸೆ.11ರಂದು 77 ವರ್ಷದ ಮಾಜಿ ರಕ್ಷಣಾ ಕಾರ್ಯದರ್ಶಿ ವಿಜಯ್ ಸಿಂಗ್ ಅವರನ್ನು ಟಾಟಾ ಸನ್ಸ್‌ನ ನಿರ್ದೇಶಕ ಮಂಡಳಿಗೆ ಮರುನೇಮಕ ಮಾಡುವ ವಿಚಾರದಲ್ಲಿ ನೊಯೆಲ್ ಟಾಟಾ ಮತ್ತು ಮಿಸ್ತ್ರಿಬಣದ ನಡುವೆ ತಿಕ್ಕಾಟ ಶುರುವಾಗಿದೆ. ಟ್ರಸ್ಟ್ ಮುಖ್ಯಸ್ಥ ನೊಯೆಲ್ ಟಾಟಾ ಹಾಗೂ ವೇಣು ಶ್ರೀನಿವಾಸನ್ ಅವರು ವಿಜಯ್ ಸಿಂಗ್‌ರನ್ನು ಮರುನೇಮಿಸುವ ಪ್ರಸ್ತಾಪ ಇಟ್ಟಿದ್ದು, ಮೆಹಲಿ ಮಿಸ್ತ್ರಿ ಸೇರಿ ಉಳಿದ ಮೂವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸತ್ತ ವಿಜಯ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆ ಬಳಿಕ ಮಿಸ್ತ್ರಿ ಬಣವು ಮೆಹಲಿ ಮಿಸ್ತ್ರಿ ಅವರನ್ನು ಆ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಪ್ರಯತ್ನಿಸಿತು. ಅದಕ್ಕೆ ನೋಯೆಲ್ ಟಾಟಾ ಮತ್ತು ಶ್ರೀನಿವಾಸನ್ ವಿರೋಧಿಸಿದರು. ಗುರುವಾರ ಟ್ರಸ್ಟಿ ಗಳು ಮತ್ತೆ ಸಭೆ ಸೇರಲಿದ್ದು, ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.ಈ ಹಿಂದೆ ಇದೇ ರೀತಿ ರತನ್ ಟಾಟಾ ಮತ್ತು ಸೈರಸ್ ಮಿಸ್ತ್ರಿ ನಡುವೆ ಟಾಟಾ ಸಮೂಹದಲ್ಲಿ ಸಂಘರ್ಷ ನಡೆದಿತ್ತು.
----ಟಾಟಾ ಗ್ರೂಪ್‌ನಲ್ಲಿ ಭಿನ್ನಮತ: ಕೇಂದ್ರ ಸರ್ಕಾರ ಮಧ್ಯಪ್ರವೇಶಟಾಟಾ ಟ್ರಸ್ಟ್‌ನ ಆಂತರಿಕ ಕಲಹದಲ್ಲಿ ಇದೀಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಆದಷ್ಟು ಶೀಘ್ರ ಈ ಭಿನ್ನಮತ ಬಗೆಹರಿಸುವಂತೆ ಸ್ಪಷ್ಟ ಸಂದೇಶ ರವಾನಿಸಿದೆ.
ಮಂಗಳವಾರ ಟಾಟಾ ಟ್ರಸ್ಟ್‌ನ ಮುಖ್ಯಸ್ಥ ನೊಯೆಲ್ ಟಾಟಾ ಮತ್ತು ಟಾಟಾ ಸನ್ಸ್‌ನ ಎನ್. ಚಂದ್ರಶೇಖರನ್, ಟಾಟಾ ಟ್ರಸ್ಟ್‌ನ ಉಪ ಮುಖ್ಯಸ್ಥ ವೇಣು ಶ್ರೀನಿವಾಸನ್, ಟ್ರಸ್ಟಿಗಳಾದ ಡೇರಿಯಸ್ ಖಂಬಾಟಾ ಅವರನ್ನು ಕರೆಸಿಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲಕಾಲ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಪಾಲ್ಗೊಂಡಿದ್ದರು.--
ಕೇಂದ್ರದ ಮಧ್ಯಪ್ರವೇಶ ಏಕೆ?ಟಾಟಾ ಕಂಪನಿಯು ದೇಶದ ಅತಿದೊಡ್ಡ ಕಾರ್ಪೊರೇಟ್ ಕಂಪನಿಯಾಗಿದ್ದು, ಐಟಿಯಿಂದ ಹಿಡಿದು ಅಡುಗೆ ಉಪ್ಪಿನ ವರೆಗೆ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಟಾಟಾ ಗ್ರೂಪ್ ದೇಶದಲ್ಲಿ 38 ಲಕ್ಷ ಕೋಟಿ ರು. ಮೌಲ್ಯದ 400 ಕಂಪನಿಗಳನ್ನು ಮುನ್ನಡೆಸುತ್ತಿದೆ. ಈ ಗ್ರೂಪ್‌ನಲ್ಲಿನ ಅಸ್ಥಿರತೆ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಮಧ್ಯಪ್ರವೇಶಿಸಿದೆ.