ಸಾರಾಂಶ
ದಾಬಸ್‍ಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ಶಿವಗಂಗೆಯ ಕೂತಘಟ್ಟ ಕ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ಪಟ್ಟಣದ ನಿವಾಸಿ ರೇಣುಕಾರಾಧ್ಯ(50) ಮೃತಪಟ್ಟ ಬೈಕ್ ಸವಾರ. ಈತ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಗುರುವಾರ ಬೆಳಗ್ಗೆ 6.15ರ ಸಮಯಲ್ಲಿ ಕೆಲಸದ ನಿಮಿತ್ತ ದಾಬಸ್‍ಪೇಟೆಯಿಂದ ಕುದೂರಿಗೆ ಬೈಕ್ ನಲ್ಲಿ ಹೋಗುವಾಗ ಕೂತಗಟ್ಟ ಕ್ರಾಸ್ ಬಳಿ ಶಿವಗಂಗೆ ಕಡೆಯಿಂದ ಬಂದ ಟಾಟಾ ಏಸ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಟಾಟಾ ಏಸ್ ವಾಹನದ ಕೆಳಗೆ ನುಗ್ಗಿದ ಪರಿಣಾಮ ಬೈಕ್ ಸವಾರನ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ನಡೆಯುತ್ತಿದ್ದಂತೆ ಟಾಟಾ ಏಸ್ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ದಾಬಸ್‍ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.