ಸಾರಾಂಶ
ತೆಲಂಗಾಣದಲ್ಲಿ ಅದಾನಿ ಒಡೆತನದ ಸಂಸ್ಥೆ 12,400 ಕೋಟಿ ರು. ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಅದಾನಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರುತ್ತಿದ್ದರೆ, ಇನ್ನೊಂದೆಡೆ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದ ಕೈ ಸರ್ಕಾರದ ಅದಾನಿ ಜೊತೆಗೆ ಸ್ನೇಹ ಒಡಂಬಡಿಕೆ ಮಾಡಿಕೊಂಡಿದೆ.
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಶ್ರೀಮಂತಿಕೆಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಅದಾನಿ ಹಾಗೂ ಮೋದಿ ವಿರುದ್ಧ ಪದೇ ಪದೇ ಕಾಂಗ್ರೆಸ್ ನಾಯಕ ರಾಹುಲ್ ವಾಗ್ದಾಳಿ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಅವರದೇ ಪಕ್ಷದ ಆಡಳಿತವಿರುವ ತೆಲಂಗಾಣ ಕಾಂಗ್ರೆಸ್ ಸರ್ಕಾರ ಅದಾನಿ ಸಂಸ್ಥೆಯೊಂದಿಗೆ 12,400 ಕೋಟಿ ರು. ಹೂಡಿಕೆ ಒಪ್ಪಂದ ಮಾಡಿಕೊಂಡಿದೆ.
ಡೇಟಾ ಸೆಂಟರ್, ಕ್ಲೀನ್ ಎನರ್ಜಿ ಪ್ರಾಜೆಕ್ಟ್ ಹಾಗೂ ಸಿಮೆಂಟ್ ಉತ್ಪಾದನೆ ಘಟಕ ಸೇರಿದಂತೆ ಹಲವಾರು ಯೋಜನೆಗಳಲ್ಲಿ ತೆಲಂಗಾಣದಲ್ಲಿ 12,400 ಕೋಟಿ ರು. ಹೂಡಿಕೆ ಮಾಡುವುದಾಗಿ ಅದಾನಿ ಸಮೂಹ ಬುಧವಾರ ಪ್ರಕಟಿಸಿದೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಸಂಸ್ಥೆಯು 4 ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಿದೆ.
ಇದು ತೆಲಂಗಾಣದಲ್ಲಿ ಹಲವಾರು ಜನರಿಗೆ ಉದ್ಯೋಗ ಸೃಷ್ಟಿಸುತ್ತದೆಯಲ್ಲದೇ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿದೆ.