ವಿದೇಶದಲ್ಲಿನ ಹ್ಯಾಂಡ್ಲರ್‌ಗಳ ಜತೆ ಸಂಪರ್ಕಜಿಹಾದ್‌ ಕೃತ್ಯಕ್ಕೆ ಇಲ್ಲಿನ ಯುವಕರ ನಿಯೋಜನೆವಿದೇಶಿ ಮದರಸಾಗಳಲ್ಲಿ ಉಗ್ರರಿಗೆ ತರಬೇತಿಪಾಕ್‌, ಜಮ್ಮು-ಕಾಶ್ಮೀರದಿಂದಲೂ ಕುಕೃತ್ಯಲಾಡೆನ್‌, ಝಾಕಿರ್‌ ನಾಯ್ಕ್‌ನಿಂದ ಪ್ರೇರಣೆಭಾರತದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸ್ಥಾಪನೆ ಗುರಿ

ಪಿಟಿಐ ಅಮರಾವತಿ

ವಿದೇಶಿ ಹ್ಯಾಂಡ್ಲರ್‌ಗಳು ಮತ್ತು ಐಸಿಸ್‌, ಅಲ್‌ ಖೈದಾದಂತಹ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಉಗ್ರಜಾಲವೊಂದನ್ನು ಆಂಧ್ರಪ್ರದೇಶದಲ್ಲಿ ಬಯಲು ಮಾಡಲಾಗಿದೆ. ಈ ಜಾಲ ಭಾರತದಲ್ಲಿ ಯುವಕರನ್ನು ಇಸ್ಲಾಮಿಕ್‌ ಮೂಲಭೂತವಾದ ಮತ್ತು ಜಿಹಾದ್‌ನತ್ತ ಆಕರ್ಷಿಸುವ ಕೆಲಸ ಮಾಡುತ್ತಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳು ಭಾನುವಾರ ತಿಳಿಸಿವೆ.

ಇದಕ್ಕೂ ಮುಂಚೆ ಆಂಧ್ರಪ್ರದೇಶ ಪೊಲೀಸರು ಆಂಧ್ರ, ಕರ್ನಾಟಕ, ಬಿಹಾರ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಂಡಗಳನ್ನು ನಿಯೋಜಿಸಿ, ಈ ಜಾಲಕ್ಕೆ ಸಂಪರ್ಕ ಹೊಂದಿರುವ ಡಜನ್ ಸಂಖ್ಯೆಯ ಶಂಕಿತರನ್ನು ಬಂಧಿಸಿದ್ದಾರೆ. ಇದರಲ್ಲಿ ಆಂಧ್ರದ ಮೂವರು ಸೇರಿದ್ದಾರೆ. ಇವರ ವಿಚಾರಣೆ ವೇಳೆ ಉಗ್ರ ಸಂಚಿನ ಭಯಾನಕತೆ ಬಯಲಾಗಿವೆ. ಜಿಹಾದ್‌ ಹರಡಲು ಸಂಚು: ಪ್ರಮುಖ ಆರೋಪಿ ರಹಮತುಲ್ಲಾ ಶರೀಫ್ ಮತ್ತು ಆತನ ಸಹಚರರು ಯುವಕರನ್ನು ಆನ್‌ಲೈನ್ ವಿಡಿಯೋಗಳ ಮೂಲಕ ಜಿಹಾದ್‌ನತ್ತ ಪ್ರೇರೇಪಿಸುತ್ತಿದ್ದ ಆಪರೇಟರ್‌ಗಳ ಜತೆ ಸಂಪರ್ಕ ಹೊಂದಿದ್ದರು. ಮಹಿಳೆಯರನ್ನು ‘ಖವಾತೀನ್‌’ ಎಂಬ ವಿಭಾಗಕ್ಕೆ ಸೇರಿಸುವ ಮೂಲಕ ಜಾಲವನ್ನು ವಿಸ್ತರಿಸಲು ಯೋಜಿಸಿದ್ದರು. ಒಸಾಮಾ ಬಿನ್ ಲಾಡೆನ್, ಇಸ್ರಾರ್ ಅಹ್ಮದ್ ಶೈಖ್, ಝಾಕಿರ್ ನಾಯ್ಕ್ ಮತ್ತು ಅನ್ವರ್ ಅಲ್-ಅವ್ಲಾಕಿಯ ವಿಡಿಯೋಗಳನ್ನು ಹಂಚಿಕೊಂಡು ಯುವಕರನ್ನು ಜಿಹಾದ್ ಮತ್ತು ತೀವ್ರವಾದಿ ಚಿಂತನೆಗಳತ್ತ ಪ್ರಭಾವಿಸಲು ಪ್ರಯತ್ನಿಸುತ್ತಿದ್ದರು. ಪಾಕಿಸ್ತಾನ್, ಅಫ್ಘಾನಿಸ್ತಾನ, ಸಿರಿಯಾ ಮತ್ತು ಬಾಂಗ್ಲಾದೇಶದಲ್ಲಿರುವ ಹ್ಯಾಂಡ್ಲರ್‌ಗಳ ಜೊತೆಗೆ 40ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂಪರ್ಕ ಹೊಂದಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ವಿದೇಶಗಳಿಂದ ತರಬೇತಿ:

ಈ ಗುಂಪಿಗೆ ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳು ಮಿಲಿಟರಿ ತರಬೇತಿ, ಸ್ನೈಪರ್ ರೈಫಲ್ ಸೇರಿದಂತೆ ಆಯುಧಗಳ ಬಳಕೆ ಬಗ್ಗೆ ತರಬೇತಿ ನೀಡಿದ್ದರು. ಶಸ್ತ್ರಾಸ್ತ್ರಗಳ ಸರಬರಾಜು ಮಾಡುವುದಾಗಿಯೂ ಭರವಸೆ ನೀಡಿದ್ದರು. ಕೆಲವರು ವಿದೇಶದ ಮದರಸಾಗಳಲ್ಲಿ ಜಿಹಾದಿ ತರಬೇತಿ ಪಡೆಯುತ್ತಿದ್ದರು. ಆರೋಪಿಗಳಲ್ಲಿ ಒಬ್ಬಳಾದ ಸಯೀದಾ ಬೇಗಂ ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರದ ಆಪರೇಟರ್‌ಗಳ ಜೊತೆ ಸಂಪರ್ಕ ಹೊಂದಿದ್ದು, ಜಿಹಾದಿ ಕೃತ್ಯಗಳನ್ನು ಸಂಘಟಿಸುವ ಯೋಜನೆ ಹಾಕಿದ್ದಳು ಎಂದು ತಿಳಿದುಬಂದಿದೆ.ಇಸ್ಲಾಮಿಕ್ ಸ್ಟೇಟ್ ಸ್ಥಾಪನೆಯ ಗುರಿ: ಉಗ್ರರು ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಯೋಜನೆ ಹಾಕಿಕೊಂಡಿದ್ದರು. ಮುಖಗವುಸು ಧರಿಸಿ ಐಸಿಸ್‌ ಧ್ವಜ ಹಿಡಿದು ‘ಒನ್ ಉಮ್ಮಾಹ್‌’ ಎಂಬ ಘೋಷಣೆಗಳನ್ನು ಕೂಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇದು ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಗುರಿಯನ್ನು ಸೂಚಿಸುತ್ತಿತ್ತು. ಭಾರತೀಯ ರಾಷ್ಟ್ರಗೀತೆಯನ್ನು ಅಪಹಾಸ್ಯ ಮಾಡುವ ಹಾಡು ಮತ್ತು ರಾಷ್ಟ್ರಧ್ವಜವನ್ನು ಅವಮಾನಿಸಿ ಸುಡುವ ವಿಷಯಗಳನ್ನು ಪೋಸ್ಟ್‌ ಮಾಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.