ಸಾರಾಂಶ
ಅಹಮದಾಬಾದ್: ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಗುಜರಾತ್‌ನ ಮೂವರು ದುರ್ದೈವಿಗಳ ಪೈಕಿ ಶೈಲೇಶ ಕಲಥಿಯಾ ಒಬ್ಬರು. ಅವರ ಪುತ್ರ ನಕ್ಷ ಮತ್ತು ಪತ್ನಿ ಶೀತಲ್‌ಬೆನ್ ಕಲಥಿಯಾ ದಾಳಿಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.
ತನ್ನ ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ಪುತ್ರ ನಕ್ಷ ಘಟನೆಯನ್ನು ವಿವರಿಸುವುದು ಹೀಗೆ:‘ಅಂದು ಸುಮಾರು 20-30 ಪ್ರವಾಸಿಗರಿದ್ದೆವು. ಇಬ್ಬರು ಉಗ್ರರು ಬಂದು ನಮ್ಮ ಧರ್ಮ ಯಾವುದೆಂದು ಕೇಳಿದರು. ಗಂಡಸರನ್ನು ಹಿಂದೂ ಮತ್ತು ಮುಸ್ಲಿಮರೆಂದು 2 ಭಾಗ ಮಾಡಿದರು. ಕಲ್ಮಾ ಪಠಿಸುವಂತೆ ಹೇಳಿದರು. ಕಲ್ಮಾ ಹೇಳಿದವರನ್ನು ಬಿಟ್ಟುಬಿಟ್ಟರು. ನನ್ನ ತಂದೆಯೂ ಸೇರಿದಂತೆ ಉಳಿದೆಲ್ಲ ಹಿಂದೂ ಪುರುಷರನ್ನು ಗುಂಡಿಟ್ಟು ಕೊಂದುಬಿಟ್ಟರು.’‘ನಮ್ಮ ಬಳಿ ಬಂದ ಉಗ್ರನೊಬ್ಬ ಹಿಂದೂಗಳೆಂದು ತಿಳಿದು ನನ್ನ ಪತಿಯ ಮೇಲೆ ಗುಂಡು ಹಾರಿಸಿದ. ಗುಂಡು ಹಾರಿಸಿದ ಬಳಿಕ ಆ ಭಯೋತ್ಪಾದಕ ನಗುತ್ತಿದ್ದ. ನನ್ನ ಪತಿ ಸಾಯುವವರೆಗೂ ಆತ ಸ್ಥಳದಿಂದ ಕದಲಲಿಲ್ಲ’ ಎಂದು ಶೀತಲ್‌ಬೆನ್ ಉಗ್ರನ ಕ್ರೌರ್ಯವನ್ನು ವಿವರಿಸಿದ್ದಾರೆ.
ಇಂದೋರ್: ಪಹಲ್ಗಾಂ ಉಗ್ರ ದಾಳಿಯಲ್ಲಿ ಕೆಲ ಅಪ್ರಾಪ್ತರೂ ಭಾಗಿಯಾಗಿದ್ದರು ಎಂಬ ಆತಂಕಕಾರಿ ವಿಷಯವನ್ನು ದುರಂತದಲ್ಲಿ ಬದುಕುಳಿದು ಬಂದ ಮಧ್ಯಪ್ರದೇಶದ ಕುಟುಂಬವೊಂದು ಹಂಚಿಕೊಂಡಿದೆ. ದಾಳಿ ವೇಳೆ ಸುಶೀಲಾ ನಥಾನಿಯನ್ ಬಲಿಯಾಗಿದ್ದರು. ಆದರೆ ಅವರ ಪತ್ನಿ ಜೆನ್ನಿಫರ್ ಮತ್ತು ಪುತ್ರ ಆಸ್ಟಿನ್ ಬದುಕುಳಿದುಬಂದಿದ್ದಾರೆ. ಜೆನ್ನಿಫರ್ ಹೇಳಿರುವ ಪ್ರಕಾರ ‘ಉಗ್ರರ ಜತೆಯಲ್ಲಿ ಸುಮಾರು 15 ವರ್ಷದ ಐದಾರು ಬಾಲಕರಿದ್ದರು. ನಮ್ಮ ಮೇಲೆ ದಾಳಿಯಾಗುವಾಗ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ತಲೆಯ ಮೇಲೆ ಕ್ಯಾಮೆರಾ ಧರಿಸಿದ್ದರು. ನನ್ನ ಕಣ್ಣಮುಂದೆಯೇ 6 ಜನರನ್ನು ಗುಂಡಿಕ್ಕಿ ಕೊಂದರು’ ಎಂದು ಹೇಳಿದ್ದಾರೆ.
ಹಸಿವಾಗಿ ಹೋಟೆಲ್‌ಗೆ ಹಿಂದಿರುಗಿದ್ದ ದಂಪತಿ ಬಚಾವ್
ಕೋಲ್ಕತಾ: ಪಹಲ್ಗಾಂ ದುರಂತದಲ್ಲಿ ಪಶ್ಚಿಮ ಬಂಗಾಳದ ಜೋಡಿಯೊಂದು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಬೈಸರನ್ ಪ್ರದೇಶಕ್ಕೆ ತೆರಳಬೇಕಿದ್ದ ದಂಪತಿ ಹಸಿವಾದ ಕಾರಣಕ್ಕೆ ಹೋಟೆಲ್‌ಗೆ ಹಿಂದಿರುಗಿದ್ದು ದಂಪತಿ ಜೀವ ಉಳಿಸಿದೆ.ಪಶ್ಚಿಮ ಬಂಗಾಳದ ದೇಬ್ರಾಜ್ ಘೋಷ್ ದಂಪತಿ ಹನಿಮೂನ್‌ಗೆಂದು ಪಹಲ್ಗಾಂಗೆ ತೆರಳಿದ್ದರು. ಬೈಸರನ್ ಕಣಿವೆಗೆ ತೆರಳಲು ಇಬ್ಬರು ಪೋನಿಗಳನ್ನು ಬುಕ್ ಮಾಡಿ, ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಟೆಲ್‌ನಿಂದ ತೆರಳಿದ್ದರು. ಈ ನಡುವೆ ಹಸಿವಾಗಿ ಹಿಂದಿರುಗಿದ್ದಾರೆ. ಅಷ್ಟರಲ್ಲಾಗಲ್ಲೇ ಅವರಿದ್ದ ಹೋಟೆಲ್‌ನ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿ ಡಜನ್‌ಗಟ್ಟಲೇ ಜೀವಗಳು ಬಲಿಯಾದವು. ಈ ದಂಪತಿ ಕೂದಲೆಳೆ ಅಂತರದಲ್ಲಿ ಪಾರಾದರು.
ಬಂಗಾಳದ ನವದಂಪತಿ ಜೀವ ಉಳಿಸಿದ ಶಿವ ದೇಗುಲ
ನವದೆಹಲಿ: ಬೈಸರನ್ ಕಣಿವೆ ಪ್ರದೇಶಕ್ಕೆ ತೆರಳಬೇಕಿದ್ದ ಜೋಡಿ ಶಿವನ ದೇಗುಲಕ್ಕೆ ತೆರಳುವ ಮನಸ್ಸಾಗಿ ತಮ್ಮ ಪ್ಲ್ಯಾನ್ ಬದಲಿಸಿದ್ದು ಭಯೋತ್ಪಾದಕರ ದಾಳಿಯಿಂದ ಜೀವ ಉಳಿಸಿಕೊಳ್ಳಲು ಸಾಧ್ಯವಾಯಿತು. ನಾಡಿಯಾ ಜಿಲ್ಲೆಯ ಸುದೀಪ್ತ ದಾಸ್ ಮತ್ತು ಅವರ ಪತ್ನಿ ಪಹಲ್ಗಾಂ ಪ್ರವಾಸದ ಭಾಗವಾಗಿ ಮಂಗಳವಾರ ಬೈಸರನ್ ಕಣಿವೆಗೆ ತೆರಳಬೇಕಿತ್ತು. ಆದರೆ ಈ ವೇಳೆ ಸುದೀಪ್ತ ಪತ್ನಿಗೆ ದೇವಸ್ಥಾನಕ್ಕೆ ತೆರಳುವ ಮನಸ್ಸಾಗಿ ಬೈಸರನ್ ಯೋಜನೆ ಮುಂದೂಡಿದರು. ಇದು ಉಗ್ರ ದಾಳಿಯಿಂದ ಇಬ್ಬರ ಜೀವ ಉಳಿಸಿತು. ಈ ಬಗ್ಗೆ ಸುದೀಪ್ತ ದಾಸ್ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ, ‘ನಾವು ಬೈಸರನ್‌ಗೂ ಯೋಜನೆ ಹಾಕಿಕೊಂಡಿದ್ದೆವು. ಆದರೆ ನನ್ನ ಹೆಂಡತಿಗೆ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡುವ ಮನಸ್ಸಾಯಿತು. ಅದರಂತೆ ಹೋದೆವು. ದೇವಸ್ಥಾನದಲ್ಲಿ ಪ್ರಾರ್ಥನೆ ಮುಗಿಸಿದಾಗ ಚಾಲಕ ಸುದ್ದಿ ತಿಳಿಸಿದ್ದ. ನಾವು ದೇವಸ್ಥಾನಕ್ಕೆ ಹೋಗದೇ ಇದ್ದರೆ ಸತ್ತೇ ಹೋಗುತ್ತಿದ್ದೆವು. ಇದು ಶಿವ ಕೃಪೆಗಿಂತ ಕಡಿಮೆಯಿಲ್ಲ’ ಎಂದಿದ್ದಾರೆ.