ಸಾರಾಂಶ
ಗಡೀಪಾರು ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ನೆಲೆಸಿರುವ 108 ಪಾಕಿಸ್ತಾನಿ ಪ್ರಜೆಗಳ ಪೈಕಿ ಸುಮಾರು 88 ಮಂದಿ ನಿರಾಳರಾಗಿದ್ದಾರೆ.
ಬೆಂಗಳೂರು : ಕೇಂದ್ರ ಸರ್ಕಾರವು ದೀರ್ಘಾವಧಿ ವೀಸಾ (ಲಾಂಗ್ ಟರ್ಮ್ ವೀಸಾ-ಎಲ್‌ಟಿವಿ)ಗಳಿಗೆ ವಿನಾಯ್ತಿ ನೀಡಿದ ಹಿನ್ನೆಲೆಯಲ್ಲಿ ಗಡೀಪಾರು ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ನೆಲೆಸಿರುವ 108 ಪಾಕಿಸ್ತಾನಿ ಪ್ರಜೆಗಳ ಪೈಕಿ ಸುಮಾರು 88 ಮಂದಿ ನಿರಾಳರಾಗಿದ್ದಾರೆ.
ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ನರಮೇಧ ಘಟನೆ ಬಳಿಕ ಪಾಕಿಸ್ತಾನ ಪ್ರಜೆಗಳ ಗಡೀಪಾರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೆ ಪಾಕಿಸ್ತಾನ ಪ್ರಜೆಗಳ ಎಲ್ಲಾ ರೀತಿಯ ವೀಸಾ ರದ್ದುಪಡಿಸಿದ್ದ ಸರ್ಕಾರ, ಲಾಂಗ್ ಟರ್ಮ್ ವೀಸಾ (ಬಹುಕಾಲ ನೆಲೆಸಿರುವ)ಗಳಿಗೆ ವಿನಾಯ್ತಿ ನೀಡಿ ಶುಕ್ರವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮೈಸೂರು, ಮಂಗಳೂರು ಹಾಗೂ ಧಾರವಾಡ ಸೇರಿ ಇತರೆಡೆ ಎಲ್‌ಟಿವಿ ಆಧಾರದ ಮೇರೆಗೆ ನೆಲೆಸಿರುವ 88 ಪಾಕಿಸ್ತಾನಿ ಪ್ರಜೆಗಳಲ್ಲಿದ್ದ ಆತಂಕ ಕೊನೆಯಾಗಿದೆ ಎಂದು ತಿಳಿದು ಬಂದಿದೆ.
ದಶಕಗಳಿಂದ ಪಾಕಿಸ್ತಾನದ ಜತೆ ರಾಜ್ಯದ ಕೆಲ ಕುಟುಂಬಗಳು ವೈವಾಹಿಕ ಸಂಬಂಧ ಹೊಂದಿವೆ. ಹೀಗೆ ವೈವಾಹಿಕ ನಂಟು ಹೊಂದಿರುವವರು ಎಲ್‌ಟಿವಿ ಪಡೆದಿದ್ದಾರೆ. ಹೀಗಾಗಿ ಪ್ರಸುತ ವಿಷಮ ಸನ್ನಿವೇಶದಲ್ಲಿ ಅವರು ಗಡಿಪಾರಿನಿಂದ ಪಾರಾಗಿದ್ದಾರೆ. ಭಾರತದಲ್ಲಿ ಬಹುಕಾಲ ನೆಲೆಸುವ ವೀಸಾವನ್ನು ಆ ದೇಶವಾಸಿಗಳಿಗೆ ಕಾನೂನು ಪ್ರಕಾರ ನೀಡಲಾಗಿದೆ. ಈ ವೀಸಾಗಳು ನವೀಕರಣವಾಗುತ್ತವೆ. ಅಕ್ರಮ ಚಟುವಟಿಕೆಗಳಲ್ಲಿ ಆ ಪ್ರಜೆಗಳು ಪಾಲ್ಗೊಂಡರೆ ಮಾತ್ರ ಕ್ರಮ ಜರುಗಿಸಬಹುದು ಎಂದು ಮೂಲಗಳು ಹೇಳಿವೆ.