ಸಿದ್ದು ಅಧ್ಯಕ್ಷತೇಲಿ ಕಾಂಗ್ರೆಸ್‌ ಒಬಿಸಿ ಟೀಂ ಮೊದಲ ಸಭೆ - ಜಾತಿ ಗಣತಿ ವೇಳೆ ಆರ್ಥಿಕ ಸಮೀಕ್ಷೆಗೂ ಪಟ್ಟು

| N/A | Published : Jul 16 2025, 12:45 AM IST / Updated: Jul 16 2025, 03:43 AM IST

ಸಿದ್ದು ಅಧ್ಯಕ್ಷತೇಲಿ ಕಾಂಗ್ರೆಸ್‌ ಒಬಿಸಿ ಟೀಂ ಮೊದಲ ಸಭೆ - ಜಾತಿ ಗಣತಿ ವೇಳೆ ಆರ್ಥಿಕ ಸಮೀಕ್ಷೆಗೂ ಪಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಮಂಗಳವಾರ ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಸದಸ್ಯರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಡಳಿಯ ಮೊದಲ ಸಭೆ ನಡೆಸಲಾಯಿತು.

  ಬೆಂಗಳೂರು :  ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಆಧಾರಿತ ಜನಗಣತಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸುವುದು ಸೇರಿದಂತೆ ಮತ್ತಿತರ ವಿಚಾರಗಳ ಕುರಿತಂತೆ ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಮಂಡಳಿಯ ಮೊದಲ ದಿನದ ಸಭೆಯಲ್ಲಿ ಚರ್ಚಿಸಲಾಯಿತು.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಮಂಗಳವಾರ ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಸದಸ್ಯರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಡಳಿಯ ಮೊದಲ ಸಭೆ ನಡೆಸಲಾಯಿತು.

ಮಂಡಳಿಯ ಸಂಚಾಲಕ ಮತ್ತು ಎಐಸಿಸಿ ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಡಾ. ಅನಿಲ್‌ ಜೈ ಹಿಂದ್‌ ಅವರು ಮಂಡಳಿ ರಚನೆ ಮತ್ತು ಸಭೆಯ ಉದ್ದೇಶಗಳನ್ನು ವಿವರಿಸಿದರು. ಅದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಆಧಾರಿತ ಜನಗಣತಿ ಬಗ್ಗೆ ಪ್ರಸ್ತಾಪಿಸಿದರು.

ಈ ವೇಳೆ ಸಭೆಯಲ್ಲಿದ್ದ ನಾಯಕರು, ಜಾತಿ ಆಧಾರಿತ ಜನಗಣತಿಯ ಜತೆಗೆ ಎಲ್ಲರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳನ್ನೂ ಸಮೀಕ್ಷೆ ನಡೆಸಬೇಕು. ಅದರಿಂದಾಗಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು, ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಸ್ಥಿತಿಗತಿಯನ್ನು ಅರಿಯಲು ಸಾಧ್ಯವಾಗಲಿದೆ. ಆ ಕುರಿತಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಎಐಸಿಸಿ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯಗಳಲ್ಲಿನ ವಿಭಿನ್ನ ಪರಿಸ್ಥಿತಿ ಕುರಿತು ಚರ್ಚೆ:

ದೇಶದ ಪ್ರತಿ ರಾಜ್ಯದಲ್ಲೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು, ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಪರಿಸ್ಥಿತಿ ವಿಭಿನ್ನವಾಗಿರಲಿದೆ. ಕರ್ನಾಟಕ ಸಮುದಾಯದ ಸಮಸ್ಯೆ ಒಂದು ರೀತಿಯಿದ್ದರೆ, ಬಿಹಾರದ ಸಮಸ್ಯೆ ಮತ್ತೊಂದು ರೀತಿಯಿರಲಿದೆ. ಹೀಗಾಗಿ ಪ್ರತಿ ರಾಜ್ಯದ ಸಮಸ್ಯೆಗಳನ್ನು ಅರಿತು, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯಬೇಕು. ಜತೆಗೆ ಸಾಮಾಜಿಕ ಅಸಮಾನತೆ ಜತೆಗೆ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಎದುರಾಗುತ್ತಿರುವ ಅಸಮಾನತೆ ಕುರಿತಂತೆಯೂ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳುವ ಕುರಿತಂತೆ ಚರ್ಚಿಸಲಾಗಿದೆ.

ದೇಶದ ಶೇ. 90ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಹಿಂದ ವರ್ಗಕ್ಕೆ ಯಾವ ಕ್ಷೇತ್ರದಲ್ಲೂ ಕೂಡ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಮಾಧ್ಯಮ ರಂಗವೂ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಮುಖ ಜವಾಬ್ದಾರಿಗಳಿಂದ ಅಹಿಂದ ವರ್ಗ ಅವಕಾಶ ವಂಚನೆಯಾಗುತ್ತಿವೆ ಎಂಬ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.

ಇಂದು ಸಭೆಯಲ್ಲಿ 3 ನಿರ್ಣಯ:

ಬುಧವಾರವೂ ಸಭೆ ಮುಂದುವರಿಯಲಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಭೆ ನಡೆಯಲಿದೆ. ಈ ವೇಳೆ ಅಹಿಂದ ವರ್ಗದವರ ಸಮಸ್ಯೆಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ, 3 ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

ಸಭೆಯಲ್ಲಿ ಹಾಜರಿದ್ದ ನಾಯಕರು:

ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆಯಲ್ಲಿ ಅಹಿಂದ ನಾಯಕರು ಮತ್ತು ಮಂಡಳಿ ಸದಸ್ಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ, ಅಶೋಕ್‌ ಗೆಹಲೋಟ್‌, ಬಿ.ಕೆ. ಹರಿಪ್ರಸಾದ್‌, ವಿ. ಹನುಮಂತರಾವ್‌, ಪಾಂಡಿಚೆರಿ ಮಾಜಿ ಮುಖ್ಯಮಂತ್ರಿಗಳಾದ ವಿ. ನಾರಾಯಣ ಸ್ವಾಮಿ, ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಸಂಸರಾದ ಅಡೂರು ಪ್ರಕಾಶ್‌, ಜ್ಯೋತಿ ಮಣಿ ಇತರರಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಭೆ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ, ನಾಯಕರಿಗೆ ನೆನಪಿನ ಕಾಣಿಕೆಯಾಗಿ ಗಾಂಧೀಜಿ ಅವರ ಕಂಚಿನ ಪ್ರತಿಮೆಯನ್ನು ನೀಡಿ ಗೌರವಿಸಿದರು.

-ಬಿಜೆಪಿ ಸಮಾನತೆ ವಿರೋಧಿ ಪಕ್ಷ:

ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಸಭೆ ಹಾಗೂ ಸಭೆ ನಂತರದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ದೇಶದ ಶೇ. 90ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಹಿಂದ ವರ್ಗದವರು ಯಾವುದೇ ರಂಗದಲ್ಲೂ ಸಮಾನತೆಯನ್ನು ಹೊಂದಿಲ್ಲ. ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷದ ಒತ್ತಡಕ್ಕೆ ಮಣಿದು ಜಾತಿ ಆಧಾರಿತ ಜನಗಣತಿಯನ್ನು ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ. ಇನ್ನು, ಸಮಾನತೆ, ಮೀಸಲಾತಿ ಬಗ್ಗೆ ಕೇಳಿದರೆ ಬಿಜೆಪಿ ನಮ್ಮನ್ನು ವಿರೋಧಿಸುತ್ತದೆ. ಬಿಜೆಪಿ ಯಾವಾಗಲೂ ಸಮಾನತೆ, ಮೀಸಲಾತಿ ವಿರೋಧಿ ಪಕ್ಷವಾಗಿದೆ. ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದರೆ ವಿರೋಧಿಸಲಾಗುತ್ತದೆ. ಅಹಿಂದ ವರ್ಗದ ಸಮಸ್ಯೆಗಳೆಲ್ಲವನ್ನೂ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಸಭೆಯ ಭಾಷಣ ಆರಂಭದಲ್ಲಿ ಸಿದ್ದರಾಮಯ್ಯ ಅವರು, ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್‌, ದೇವರಾಜ ಅರಸು ಅವರನ್ನು ಸ್ಮರಿಸಿದರು. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ, ಸಾಮಾಜಿಕ ನ್ಯಾಯವನ್ನು ನಂಬುವ ಎಲ್ಲರ ಪ್ರತಿನಿಧಿಯಾಗಿ ಭಾಗವಹಿಸಿದ್ದೇನೆ ಎಂದು ತಿಳಿಸಿದರು.

ದೇಶದಲ್ಲಿ ಈಗಲೂ ಮೇಲ್ಜಾತಿ, ಕೆಳಜಾತಿ ಎಂಬ ಭೇದಭಾವ ಮಾಡಲಾಗುತ್ತಿದೆ. ಅದನ್ನು ತೊಡೆದು ಹಾಕುವ ಉದ್ದೇಶದೊಂದಿಗೆ ಎಐಸಿಸಿ ಒಬಿಸಿ ಸಲಹಾ ಮಂಡಳಿ ರಚಿಸಲಾಗಿದೆ. ದೇಶದಲ್ಲಿ ಸಮಾನತೆ ತರುವುದು ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷದ ಆಶಯವಾಗಿದ್ದು, ಅದಕ್ಕೆ ತಕ್ಕಂತೆ ಮಂಡಳಿ ಕೆಲಸ ಮಾಡಲಿದೆ. ಬುಧವಾರ ಮತ್ತೆ ಸಭೆ ನಡೆಯಲಿದ್ದು, ಅಹಿಂದ ವರ್ಗದವರ ಅನುಕೂಲಕ್ಕೆ ತಕ್ಕಂತೆ ನಿರ್ಣಯ ತೆಗೆದುಕೊಳ್ಳಲಾಗುವುದು. ಅದನ್ನು ದೇಶದ ಮುಂದಿಡಲಾಗುವುದು.

-ಅಶೋಕ್‌ ಗೆಹಲೋಟ್‌, ರಾಜಸ್ಥಾನ ಮಾಜಿ ಸಿಎಂ

ಸಭೆಯಲ್ಲಿ ಸಿದ್ದು ಮಂಡಿಸಿದ ಪ್ರಮುಖ ವಿಷಯಗಳು:

* ರಾಷ್ಟ್ರದಲ್ಲಿ ಜಾತಿ ಆಧಾರಿತ ಜನಗಣತಿ ಪೂರ್ಣಗೊಳಿಸಲು ನಿರಂತರ ಪ್ರಯತ್ನ

* ಜಾತಿ ಜನಗಣತಿ ಆಧಾರದಲ್ಲಿ ಶೇ. 75ರಷ್ಟು ಮೀಸಲಾತಿಗೆ ಹೋರಾಟ ನಡೆಸಲಾಗುವುದು

* ಖಾಸಗಿ ವಲಯದ ಉದ್ಯೋಗಗಳು, ಸರ್ಕಾರಿ ಗುತ್ತಿಗೆಗಳು ಮತ್ತು ಆರ್ಥಿಕ ಬೆಂಬಲದ ಮೂಲಕ ಆರ್ಥಿಕ ಅವಕಾಶಗಳ ವಿಸ್ತರಣೆ

* ರಾಹುಲ್ ಗಾಂಧಿ ಹೇಳಿದಂತೆ ಎಷ್ಟು ಜನಸಂಖ್ಯೆಯೋ ಅಷ್ಟು ಹಕ್ಕು- ಇದು ಪ್ರಜಾಪ್ರಭುತ್ವದ ಹೃದಯ

* ಅಹಿಂದ ಒಂದು ಮತಬ್ಯಾಂಕ್ ಅಲ್ಲ, ಇದು ಭಾರತದ ಆತ್ಮಸಾಕ್ಷಿಯ ಧ್ವನಿ

* ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಮತ್ತು ಸರ್ವೋದಯ ತತ್ವದಲ್ಲಿ, ಯಾರೂ ಹಿಂದೆ ಉಳಿಯದ, ಎಲ್ಲರೂ ಒಟ್ಟಿಗೆ ಏಳುವ ಭಾರತವನ್ನು ಕಟ್ಟೋಣ

Read more Articles on