ಸಾರಾಂಶ
ಬೆಂಗಳೂರು : ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ಸಲಹಾ ಮಂಡಳಿ ಅಧ್ಯಕ್ಷನಾಗಿ ನನ್ನನ್ನು ನೇಮಿಸಿಲ್ಲ. ಸದಸ್ಯನನ್ನಾಗಿಯಷ್ಟೆ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ, ಈ ತಿಂಗಳ 15 ರಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿರುವ ಒಬಿಸಿ ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈಹಿಂದ್ ವಹಿಸಿಕೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿ 50 ಮಂದಿ ಭಾಗವಹಿಸುವ ಈ ಸಭೆಯ ಆತಿಥ್ಯವನ್ನಷ್ಟೇ ನಾನು ವಹಿಸಿಕೊಂಡಿದ್ದೇನೆ ಎಂದು ಅವರು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟವಾಗಿ ಹೇಳಿದ್ದಾರೆ.
ಜವಾಬ್ದಾರಿ ಕೊಟ್ರೆ ಓಡಿ ಹೋಗಲಿಕ್ಕಾಗುತ್ತಾ?:
ಇದಕ್ಕೂ ಮೊದಲು ವಿಧಾನಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಲಹಾ ಮಂಡಳಿಗೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೆ. ಈ ಬಗ್ಗೆ ನಾನು ಹೈಕಮಾಂಡ್ ಜತೆ ಮಾತನಾಡುತ್ತೇನೆ. ಕೇಂದ್ರದ ಒಬಿಸಿ ಘಟಕದಿಂದ ಕರ್ನಾಟಕದಲ್ಲಿ ಸಭೆಯೊಂದನ್ನು ಮಾಡಲು ಹೇಳಿದ್ದರು. ಹೀಗಾಗಿ ಜು.15ರಂದು ಸಭೆ ನಿಗದಿ ಮಾಡಿದ್ದೆ ಅಷ್ಟೇ ಎಂದು ಹೇಳಿದರು.
ಸಲಹಾ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿಮಗೆ ನೀಡಿದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ, ‘ಜವಾಬ್ದಾರಿ ಕೊಟ್ಟಾಗ ಬಿಟ್ಟು ಓಡಿ ಹೋಗೋಕೆ ಆಗುತ್ತಾ? ಸಲಹಾ ಮಂಡಳಿಗೆ ನೇಮಿಸಲು ನಾನೇನು ಕೇಳಿರಲಿಲ್ಲ. ಅವರು ಘೋಷಣೆ ಮಾಡಿದ್ದಾರೆ. ಯಾವ ರೀತಿ ಎಂಬುದರ ಬಗ್ಗೆ ಹೈಕಮಾಂಡ್ ಜತೆ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದ್ದರು.
ಹೈಕಮಾಂಡ್ ಜತೆಮಾತನಾಡುತ್ತೇನೆಸಲಹಾ ಮಂಡಳಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಾಗ ಬಿಟ್ಟು ಓಡಿ ಹೋಗೋಕೆ ಆಗುತ್ತಾ? ಸಲಹಾ ಮಂಡಳಿಗೆ ನೇಮಿಸಲು ನಾನೇನು ಕೇಳಿರಲಿಲ್ಲ. ಅವರು ಘೋಷಣೆ ಮಾಡಿದ್ದಾರೆ. ಯಾವ ರೀತಿ ಎಂಬುದರ ಬಗ್ಗೆ ಹೈಕಮಾಂಡ್ ಜತೆ ಮಾತನಾಡುತ್ತೇನೆ
.-ಸಿದ್ದರಾಮಯ್ಯ, ಸಿಎಂ
ರಾಜ್ಯ ರಾಜಕಾರಣದಲ್ಲಿ ಸಂಚಲನ
ಕಾಂಗ್ರೆಸ್ಸಿನತ್ತ ದೇಶದ ಒಬಿಸಿ ಸಮುದಾಯಗಳನ್ನು ಸೆಳೆಯಲು ರಾಷ್ಟ್ರೀಯ ಸಲಹಾ ಮಂಡಳಿಯನ್ನು ಎಐಸಿಸಿ ರಚನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದರ ನೇತೃತ್ವ ವಹಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಪಟ್ಟದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯತ್ನ ಇದು ಎಂದು ಬಿಜೆಪಿ ನಾಯಕರು ಸಾಲುಸಾಲಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ, ಒಬಿಸಿ ಸಲಹಾ ಮಂಡಳಿಗೆ ನಾನು ಮುಖ್ಯಸ್ಥ ಅಲ್ಲ, ನಾನು ಸದಸ್ಯ. ಆತಿಥ್ಯ ಮಾತ್ರ ವಹಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.