19ನೇ ದಿನ ಪೂರೈಸಿರುವ ಮಧ್ಯಪ್ರಾಚ್ಯ ಯುದ್ಧ ಬುಧವಾರ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ಅಮೆರಿಕ - ಇಸ್ರೇಲ್‌ ಸೇನೆಗಳು ಇರಾನ್‌ನ ಗುಪ್ತಚರ ಸಚಿವ ಎಮ್ತಿಯಾಜ್‌ ಹತ್ಯೆ ಮಾಡಿದ್ದಲ್ಲದೆ, ಇರಾನ್‌ ಅಣು ವಿದ್ಯುತ್‌ ಘಟಕ, ಭೂಗತ ಕ್ಷಿಪಣಿ ಕೇಂದ್ರ, ಪರ್ಷಿಯನ್‌ ಕೊಲ್ಲಿಯಲ್ಲಿನ ಅನಿಲ ಘಟಕ, ರಾಜಧಾನಿ ಟೆಹ್ರಾನ್‌ನ ಮೇಲೆ ಭೀಕರ ದಾಳಿ ನಡೆಸಿವೆ.

ಲಾರಿಜಾನಿ, ಗುಪ್ತಚರ ಸಚಿವರ ಹತ್ಯೆ, ತೈಲ ಭಾವಿ, ಅಣು ವಿದ್ಯುತ್‌ ಘಟಕದ ಮೇಲೆ ದಾಳಿಗೆ ಇರಾನ್‌ ಕಿಡಿ

ಇಸ್ರೇಲ್‌, ಯುಎಇ, ಬಹ್ರೈನ್‌, ಇರಾಕ್‌, ಕತಾರ್‌, ಸೌದಿ ಅರೇಬಿಯಾ ಮೇಲೆ ಇರಾನ್‌ ಭೀಕರ ಪ್ರತಿದಾಳಿ

ದುಬೈ/ಟೆಹ್ರಾನ್‌: 19ನೇ ದಿನ ಪೂರೈಸಿರುವ ಮಧ್ಯಪ್ರಾಚ್ಯ ಯುದ್ಧ ಬುಧವಾರ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ಅಮೆರಿಕ - ಇಸ್ರೇಲ್‌ ಸೇನೆಗಳು ಇರಾನ್‌ನ ಗುಪ್ತಚರ ಸಚಿವ ಎಮ್ತಿಯಾಜ್‌ ಹತ್ಯೆ ಮಾಡಿದ್ದಲ್ಲದೆ, ಇರಾನ್‌ ಅಣು ವಿದ್ಯುತ್‌ ಘಟಕ, ಭೂಗತ ಕ್ಷಿಪಣಿ ಕೇಂದ್ರ, ಪರ್ಷಿಯನ್‌ ಕೊಲ್ಲಿಯಲ್ಲಿನ ಅನಿಲ ಘಟಕ, ರಾಜಧಾನಿ ಟೆಹ್ರಾನ್‌ನ ಮೇಲೆ ಭೀಕರ ದಾಳಿ ನಡೆಸಿವೆ.

ಮತ್ತೊಂದೆಡೆ ತನ್ನ ತೈಲ ಭಾವಿ, ಅನಿಲ ಮೂಲಸೌಕರ್ಯದ ಮೇಲಿನ ದಾಳಿ, ಲಾರಿಜಾನಿ ಹತ್ಯೆಗೆ ಆಕ್ರೋಶಗೊಂಡಿರುವ ಇರಾನ್‌ 4 ಕೊಲ್ಲಿ ದೇಶ, ಇರಾಕ್‌ ಮತ್ತು ಇಸ್ರೇಲ್‌ನಲ್ಲಿ ತೈಲ ಬಾವಿ, ರಾಯಭಾರ ಕಚೇರಿ, ಸೇನಾ ನೆಲೆ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೊಲ್ಲಿ ದೇಶಗಳಲ್ಲಿ ತೈಲ ಮೂಲಸೌಕರ್ಯ ಗುರಿಯಾಗಿಸಿ ಭೀಕರ ದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಹೀಗಾಗಿ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ.

ಭಾರೀ ಪ್ರತಿದಾಳಿ:

ತನ್ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿಯನ್ನು ಇಸ್ರೇಲ್‌ ಹತ್ಯೆ ಮಾಡಿದ್ದಕ್ಕೆ ಇರಾನ್‌ ಕೆಂಡಾಮಂಡಲವಾಗಿದ್ದು, ‘ಲಾರಿಜಾನಿ ಹತ್ಯೆ ಮಾಡಿದವರು ತಮ್ಮ ದಾಳಿಗೆ ವಿಷಾದ ಪಡಬೇಕು. ಆ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಗುಡುಗಿದೆ. ಈ ಕುರಿತು ಇರಾನ್ ಸೇನಾ ಮುಖ್ಯಸ್ಥ ಅಮಿರ್‌ ಹತಾಮಿ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ ಇಂಥದ್ದೊಂದು ಎಚ್ಚರಿಕೆ ಬೆನ್ನಲ್ಲೇ ವಾಯುರಕ್ಷಣಾ ವ್ಯವಸ್ಥೆ ಭೇದಿಸುವ ಕ್ಷಿಪಣಿಗಳನ್ನು ಬಳಸಿ ಇಸ್ರೇಲ್‌, ಯುಎಇ, ಬಹ್ರೈನ್‌, ಇರಾಕ್‌, ಕತಾರ್‌, ಸೌದಿ ಅರೇಬಿಯಾದಲ್ಲಿನ ತೈಲ ಬಾವಿಗಳು, ಅಮೆರಿಕದ ಸೇನಾ ನೆಲೆಗಳು, ರಾಯಭಾರ ಸಿಬ್ಬಂದಿ ಕಚೇರಿ ಗುರಿಯಾಗಿಸಿ ಇರಾನ್‌ ಪ್ರತಿದಾಳಿ ನಡೆಸಿದೆ.

ಜೊತೆಗೆ ಪರ್ಷಿಯನ್‌ ಕೊಲ್ಲಿಯಲ್ಲಿನ ತನ್ನ ನೈಸರ್ಗಿಕ ಅನಿಲಬಾವಿಯ ಮೇಲಿನ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌, ಇದಕ್ಕೆ ಪ್ರತೀಕಾರವಾಗಿ ಸೌದಿ ಅರೇಬಿಯಾದ ಸಮ್ರೆಫ್ ಸಂಸ್ಕರಣಾಗಾರ ಮತ್ತು ಜುಬೈಲ್ ಪೆಟ್ರೋಕೆಮಿಕಲ್ ಸಂಕೀರ್ಣ, ಯುಎಇಯ ಅಲ್ ಹಸನ್ ಅನಿಲ ಕ್ಷೇತ್ರ ಮತ್ತು ಪೆಟ್ರೋಕೆಮಿಕಲ್ ಸ್ಥಾವರಗಳು, ಕತಾರ್‌ನಲ್ಲಿರುವ ಸಂಸ್ಕರಣಾಗಾರಕ್ಕೆ ದಾಳಿಯ ಬೆದರಿಕೆ ಹಾಕಿದೆ.

==

ಲಾರಿಜಾನಿ ಸಾವು ಖಚಿತಪಡಿಸಿದ ಇರಾನ್‌

ಮಗಳ ಮನೆಯಲ್ಲಿದ್ದ ವೇಳೆ ಇಸ್ರೇಲ್‌ ದಾಳಿ

ದಾಳಿಗೆ ಲಾರಿ ಪುತ್ರ ಸೇರಿ ಹಲವರು ಸಾವು

ಟೆಹ್ರಾನ್‌: ಇಸ್ರೇಲ್‌ನ ವಾಯುದಾಳಿಯಲ್ಲಿ ರಾಷ್ಟ್ರಿಯ ಭದ್ರತಾ ಮಂಡಳಿ ಮುಖ್ಯಸ್ಥ ಅಲಿ ಲಾರಿಜಾನಿ ಸಾವನ್ನಪ್ಪಿದ್ದನ್ನು ಇರಾನ್‌ ಖಚಿತಪಡಿಸಿದೆ. ರಾಜಧಾನಿ ಟೆಹ್ರಾನ್‌ನ ಈಶಾನ್ಯ ವಲಯದಲ್ಲಿನ ಪರ್ದಿಸ್‌ ಪ್ರಾಂತ್ಯದಲ್ಲಿನ ತಮ್ಮ ಮಗಳ ಮನೆಯಲ್ಲಿ ಇದ್ದ ವೇಳೆ ನಡೆದ ದಾಳಿಯಲ್ಲಿ ಲಾರಿಜಾನಿ ಹುತಾತ್ಮರಾಗಿದ್ದಾರೆ ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಲಾರಿಯ ಜೊತೆಗೆ ಅವರ ಪುತ್ರ ಮೊರ್ತಜಾ ಲಾರಿಜಾನಿ, ಉಪಭದ್ರತಾ ಮುಖ್ಯಸ್ಥ ಅಲಿರೆಝಾ ಬಯಾತ್‌ ಸೇರಿದಂತೆ ಹಲವು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.