ಸಾರಾಂಶ
‘ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಕಾಂಗ್ರೆಸ್‌ನ ಒಂದು ಗುಂಪು ಯತ್ನ ನಡೆಸಿದ್ದು, ಅವರು ಇನ್ನು 2-3 ತಿಂಗಳ ಬಳಿಕ ಅಂದರೆ ಬಜೆಟ್ ಅಧಿವೇಶನದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ
ಶಿವಮೊಗ್ಗ : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಕಾಂಗ್ರೆಸ್‌ನ ಒಂದು ಗುಂಪು ಯತ್ನ ನಡೆಸಿದ್ದು, ಅವರು ಇನ್ನು 2-3 ತಿಂಗಳ ಬಳಿಕ ಅಂದರೆ ಬಜೆಟ್ ಅಧಿವೇಶನದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷವಾಗಿದೆ. ಅವರ ಸಾಧನೆ ಏನು ಎಂದು ಕೇಳಿದರೆ ಶೂನ್ಯ. ಎಲ್ಲಿಯೂ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಬಿಡಿ, ಕಾಂಗ್ರೆಸ್ ಶಾಸಕರಿಗೂ ಅನುದಾನವಿಲ್ಲ. ಅದರಲ್ಲೂ ಹೊಸದಾಗಿ ಆಯ್ಕೆಯಾದವರು ಜನರ ಹತ್ತಿರ ಹೋಗುವುದೇ ಕಷ್ಟವಾಗಿದೆ. ಆ ಪಕ್ಷದಿಂದಲೇ ಬೇಸರದ ಮಾತುಗಳು ಕೇಳಿ ಬರುತ್ತಿವೆ . ಇದಕ್ಕೆಲ್ಲ ಸಿದ್ದರಾಮಯ್ಯ ಅವರೇ ಕಾರಣ’ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನಲ್ಲಿಯೇ ಯುದ್ಧ ನಡೆಯುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಅವರ ಪಕ್ಷದಲ್ಲಿ ಅನೇಕ ಶಾಸಕರು ಮತ್ತು ನಾಯಕರಿಗೆ ಇಷ್ಟವಿಲ್ಲ ಎಂದರು.ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಆ ಪಕ್ಷದಲ್ಲಿ ಪ್ರಯತ್ನ ಆರಂಭವಾಗಿದೆ.
ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಲು ಇಷ್ಟವಿಲ್ಲ. ಹೀಗಾಗಿ, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿ ಇರುವ ವೇಳೆಯಲ್ಲಿಯೇ ಔತಣಕೂಟದ ನೆಪದಲ್ಲಿ ಕೆಲವು ಶಾಸಕರುಗಳ ಗುಪ್ತ ಸಭೆ ನಡೆಸಿ ತಮ್ಮ ಉಳಿವಿಗೆ ಪ್ರತಿತಂತ್ರ ರೂಪಿಸುವ ಯತ್ನ ನಡೆಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ ಎಂದು ಹೇಳಿದರು.