ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ದೇಶದ ನೌಕಾಪಡೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ದಂಪತಿಗೆ ನಿಮ್ಮ ಗುರುತು ಸಾಬೀತುಪಡಿಸಿ ಎಂದು ಚುನಾವಣಾ ಆಯೋಗ ನೋಟಿಸ್‌ ನೀಡಿದ ಪ್ರಸಂಗ ನಡೆದಿದೆ.

ಮಾಜಿ ನೌಕಾಪಡೆ ಮುಖ್ಯಸ್ಥ ಪ್ರಕಾಶ್‌ಗೆ ಸೂಚನೆ

1971ರ ಯುದ್ಧದಲ್ಲಿ ಇವರದ್ದು ಪ್ರಮುಖ ಪಾತ್ರ

ಪಣಜಿ: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ದೇಶದ ನೌಕಾಪಡೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ದಂಪತಿಗೆ ನಿಮ್ಮ ಗುರುತು ಸಾಬೀತುಪಡಿಸಿ ಎಂದು ಚುನಾವಣಾ ಆಯೋಗ ನೋಟಿಸ್‌ ನೀಡಿದ ಪ್ರಸಂಗ ನಡೆದಿದೆ.

1971ರ ಯುದ್ಧದ ಸೇನಾನಿ ಆಗಿರುವ ಪ್ರಕಾಶ್‌ ಈಗ ಗೋವಾದಲ್ಲಿದ್ದಾರೆ. ಅಲ್ಲಿ ಅವರಿಗೆ ನೋಟಿಸ್‌ ಬಂದಿದೆ.

ಇದನ್ನು ಅವರು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದು, ‘ನಾವು ಈಗಾಗಲೇ ಪರಿಷ್ಕರಣೆ ಕುರಿತ ದಾಖಲೆ ಸಲ್ಲಿಸಿದ್ದೆವು. ಆದರೆ ಗುರುತು ಸಾಬೀತಿಗೆ ಕೆಲವು ದಾಖಲೆ ಸಲ್ಲಿಸಲು ನನಗೆ ನನ್ನ ಪತ್ನಿಗೆ ನೋಟಿಸ್‌ ಬಂದಿದೆ. ನನಗೆ 87 ವರ್ಷ. ಪತ್ನಿಗೆ 82 ವರ್ಷ. 18 ಕಿ.ಮೀ. ದೂರದ ಕಚೇರಿಗೆ ಹೋಗಿ ಸ್ಪಷ್ಟನೆ ನೀಡಲು ನಮಗೆ ಸೂಚಿಸಲಾಗಿದೆ. ಆದರೆ ಈ ಹಿಂದೆಯೇ ಅರ್ಜಿ ಭರ್ತಿ ವೇಳೆ ನಾವು ಮಾಹಿತಿ ನೀಡಿದ್ದೆವು. ಮತಗಟ್ಟೆ ಅಧಿಕಾರಿ ಕೂಡ 3 ಸಲ ಮನೆಗೆ ಬಂದು ಸ್ಪಷ್ಟನೆ ಕೇಳಿದ್ದರು. ಆದರೂ ನೋಟಿಸ್‌ ನೀಡಲಾಗಿದೆ. ಜನರು ನೀಡಿದ ಮಾಹಿತಿಯನ್ನು ಪ್ರತಿಬಿಂಬಿಸಲು ಆಯೋಗಕ್ಕೆ ಸಾಧ್ಯವಾಗದಿದ್ದರೆ ಮಾಹಿತಿ ವಿಧಾನವನ್ನೇ ಪರಿಷ್ಕರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಇದರ ನಡುವೆ, ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ‘ಇದು ಸ್ಥಳೀಯ ಅಧಿಕಾರಿಯಿಂದ ಆದ ಪ್ರಮಾದ’ ಎಂದಿದೆ.