ನವದೆಹಲಿ: ‘2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನು (ಆರ್3) ಕಡ್ಡಾಯವಾಗಿ ಜಾರಿಗೊಳಿಸಬೇಕು. ಪಠ್ಯಪುಸ್ತಕಗಳು ಇನ್ನೂ ಲಭ್ಯವಾಗದಿದ್ದರೂ, ಸ್ಥಳೀಯವಾಗಿ ಲಭ್ಯವಿರುವ ಪುಸ್ತಕಗಳನ್ನೇ ಬಳಸಿಕೊಂಡು 7 ದಿನಗಳ ಒಳಗೆ ತುರ್ತಾಗಿ ಬೋಧನೆಯನ್ನು ಆರಂಭಿಸಬೇಕು’ ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಗುರುವಾರ ಆದೇಶಿಸಿದೆ.
ದ್ವಿಭಾಷಾ ಸೂತ್ರದ ಬಗ್ಗೆ ಚರ್ಚೆ
ಕರ್ನಾಟಕದ ರಾಜ್ಯ ಪಠ್ಯಕ್ರಮಗಳಲ್ಲಿ ದ್ವಿಭಾಷಾ ಸೂತ್ರದ ಬಗ್ಗೆ ಚರ್ಚೆ ನಡೆದಿರುವ ನಡುವೆಯೇ ಈ ಆದೇಶ ಬಂದಿದೆ.
‘ಅನೇಕ ಶಾಲೆಗಳು ಈಗಾಗಲೇ ಆರ್3 ಅನುಷ್ಠಾನ ಮಾಡಿವೆ. ಉಳಿದ ಶಾಲೆಗಳೂ ತಕ್ಷಣವೇ ಬೋಧನೆಯನ್ನು ಪ್ರಾರಂಭಿಸಬೇಕು. ಅಧಿಕೃತ ಪಠ್ಯಪುಸ್ತಕಗಳು ಬರುವವರೆಗೆ ಸ್ಥಳೀಯವಾಗಿ ಲಭ್ಯವಿರುವ ಪುಸ್ತಕಗಳು ಅಥವಾ ವಸ್ತುಗಳನ್ನು ಬಳಸಿಕೊಳ್ಳಬೇಕು. ಇದನ್ನು ನಮ್ಮ ಪ್ರಾದೇಶಿಕ ಕಚೇರಿಗಳು ಮೇಲ್ವಿಚಾರಣೆ ಮಾಡುತ್ತವೆ’ ಎಂದು ಎಚ್ಚರಿಸಿದೆ.
ಸಿಬಿಎಸ್‌ಇ 6ನೇ ತರಗತಿಯಿಂದ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವುದಾಗಿ ಕಳೆದ ವಾರವಷ್ಟೇ ಆದೇಶ ಹೊರಡಿಸಿತ್ತು. ಆರ್1, ಆರ್2, ಆರ್3 ಎಂಬ 3 ಭಾಷೆಗಳಿರುತ್ತವೆ. ಇವುಗಳಲ್ಲಿ 2 ಭಾಷೆಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರಬೇಕು ಎಂದು ತಿಳಿಸಿತ್ತು. ಅದನ್ನೀಗ ಅತಿ ತುರ್ತಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ.
6ನೇ ತರಗತಿಯಿಂದ ಕಡ್ಡಾಯ ಕಲಿಕೆ ಶುರು
- ಸಿಬಿಎಸ್‌ಇ ಶಾಲೆಗಳಲ್ಲಿ ತೃತೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು
- ಅದರಂತೆ 6ನೇ ತರಗತಿಯಿಂದ ತ್ರಿಭಾಷಾ ಸೂತ್ರ ಜಾರಿಗೆ ತರುವುದಾಗಿ ಕಳೆದ ವಾರ ಹೇಳಿದ್ದ ಸಿಬಿಎಸ್‌ಇ
- ಇದೀಗ ಇನ್ನೊಂದು ವಾರದಲ್ಲಿ ತೃತೀಯ ಭಾಷೆ ಕಲಿಕೆ ಆರಂಭಿಸಲು ತುರ್ತಾಗಿ ಶಾಲೆಗಳಿಗೆ ಬಂತು ಸೂಚನೆ
- ಆದರೆ ಪಠ್ಯಪುಸ್ತಕವೇ ಇಲ್ಲ. ‘ಸ್ಥಳೀಯವಾಗಿ ಲಭ್ಯವಿರುವ ಪುಸ್ತಕ ಬಳಸಿ’ ಎಂದು ಸಿಬಿಎಸ್‌ಇಯಿಂದ ನಿರ್ದೇಶನ
- ತ್ರಿಭಾಷೆಯಲ್ಲಿ 2 ಭಾರತೀಯ ಭಾಷೆಗಳನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ಹೇಳಿರುವ ಶಿಕ್ಷಣ ಮಂಡಳಿ
