ಸಾರಾಂಶ
ಪಹಲ್ಗಾಂ ಉಗ್ರ ದಾಳಿಯಿಂದ ಶಿರಸಿಯ ಕುಟುಂಬವೊಂದು ಕೂದಲೆಳೆಯ ಅಂತರದಿಂದ ಪಾರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಮಗ ಹಠ ಮಾಡಿದ್ದಕ್ಕೆ ತಿಂಡಿ ಕೊಡಿಸಲು ಹೋದ ಕಾರಣ, ಪ್ರದೀಪ್ ಹೆಗಡೆ ಕುಟುಂಬ ಭಯೋತ್ಪಾದಕರಿಂದ ಜೀವ ಉಳಿಸಿಕೊಂಡಿದೆ.
- ಶುಭಾ ಹೆಗಡೆ ಪಕ್ಕದಲ್ಲೇ ತೂರಿಹೋಗಿದ್ದ ಗುಂಡು
ನವದೆಹಲಿ: ಪಹಲ್ಗಾಂ ಉಗ್ರ ದಾಳಿಯಿಂದ ಶಿರಸಿಯ ಕುಟುಂಬವೊಂದು ಕೂದಲೆಳೆಯ ಅಂತರದಿಂದ ಪಾರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಮಗ ಹಠ ಮಾಡಿದ್ದಕ್ಕೆ ತಿಂಡಿ ಕೊಡಿಸಲು ಹೋದ ಕಾರಣ, ಪ್ರದೀಪ್ ಹೆಗಡೆ ಕುಟುಂಬ ಭಯೋತ್ಪಾದಕರಿಂದ ಜೀವ ಉಳಿಸಿಕೊಂಡಿದೆ.ಶಿರಸಿಯ ಪ್ರದೀಪ್ ಹೆಗಡೆ ಮತ್ತು ಶುಭಾ ಹೆಗಡೆ ದಂಪತಿ ತಮ್ಮ ಪುತ್ರ ಸಿದ್ಧಾಂತ್ ಜೊತೆ ಏ.21ರಂದಯ ಶ್ರೀನಗರ ತೆರಳಿ, 22 ರಂದು ಪಹಲ್ಗಾಂಗೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ಬೈಸರನ್ ಕಡೆಗೆ ಕುಟುಂಬ ಹೋಗುತ್ತಿದ್ದಾಗ ಪುತ್ರ ಹಸಿವಾಗುತ್ತಿದೆ ಎಂದು ಹೇಳಿ ತಿಂಡಿಗಾಗಿ ಹಠ ಹಿಡಿದಿದ್ದಾನೆ. ಆದ್ದರಿಂದ ದಂಪತಿ ಅಲ್ಲೇ ಸ್ಥಾಪಿಸಲಾಗಿದ್ದ ಆಹಾರ ಮಳಿಗೆಗೆ ಮಗನಿಗೆ ತಿಂಡಿ ಕೊಡಿಸಲು ಕರೆದುಕೊಂಡು ಹೋಗಿದ್ದಾರೆ.
ಆ ಸಮಯದಲ್ಲಿ ಗುಂಡಿನ ಸದ್ದು ಕಿವಿಗೆ ಬಿದ್ದಿದೆ. ಆರಂಭದಲ್ಲಿ ಪಟಾಕಿ ಸದ್ದು ಎಂದು ಭಾವಿಸಿದ್ದಾರೆ. ಕಡೆಗೆ ಭಯೋತ್ಪಾದಕ ಬಂದೂಕು ಹಿಡಿದು ಗುಂಡು ಹಾರಿಸುತ್ತಿರುವುದು ಕಾಣಿಸಿದೆ. ಏನೂ ಗೊತ್ತಾಗದೇ ದಂಪತಿ ಸ್ಥಳದಲ್ಲೇ ಮಲಗಿಕೊಂಡಿದ್ದಾರೆ. ಈ ನಡುವೆ ಶುಭಾ ಟೇಬಲ್ ಮೇಲಿದ್ದ ಬ್ಯಾಗ್ ಎತ್ತಿಕೊಳ್ಳಲು ಪ್ರಯತ್ನಿಸಿದಾಗ ಬುಲೆಟ್ ಕಿವಿ ಪಕ್ಕದಲ್ಲೇ ಪಾಸಾಗಿತ್ತು. ಆ ಬಳಿಕ ಸ್ಥಳೀಯರು ಬಂದು ಓಡಲು ಹೇಳಿದ್ದಾರೆ. ಅದರಂತೆ ಭಯಗೊಂಡು ಪ್ರದೀಪ್ ಹೆಗಡೆ ಕುಟುಂಬ ಎದ್ದು ಓಡಿ ಹೋಗಿ ಜೀವ ಉಳಿಸಿಕೊಂಡಿದೆ.