ಸಾರಾಂಶ
ಪೋರ್‌ಬಂದರ್ : ಗುಜರಾತ್‌ನ ಪೋರಬಂದರ್ ಹೊರವಲಯದ ವಿಮಾನ ನಿಲ್ದಾಣವೊಂದರಲ್ಲಿ ಭಾರತೀಯ ಕರಾವಳಿ ಪಡೆಯ (ಐಸಿಜಿ) ಹೆಲಿಕಾಪ್ಟರ್‌ವೊಂದು ಭಾನುವಾರ ಮಧ್ಯಾಹ್ನ ಪತನವಾಗಿದ್ದು, ಅದರಲ್ಲಿದ್ದ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ದೈನಂದಿನ ರಕ್ಷಣಾತ್ಮಕ ತರಬೇತಿ ಅಭ್ಯಾಸ ಮುಗಿಸಿ ಕರಾವಳಿ ಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ ಮಧ್ಯಾಹ್ನ 12.10ಕ್ಕೆನಿಲ್ದಾಣದ ರನ್‌ವೇನಲ್ಲಿ ಇಳಿಯುತ್ತಿತ್ತು. ಆಗ ಘಟನೆ ನಡೆದಿದೆ.
ರನ್‌ವೇನಲ್ಲಿ ನೆಲಕ್ಕಪ್ಪಳಿಸಿದ ನಂತರ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅದನ್ನು ನಿಯಂತ್ರಣಕ್ಕೆ ತರಲಾಯಿತು. ಆದರೆ ಅಷ್ಟರೊಳಗೆ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸಿಬ್ಬಂದಿ ದೇಹ ಸಂಪೂರ್ಣ ಸುಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ದ ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಕಳೆದ ವರ್ಷ ಸೆ.2ರಂದು ಕೂಡ ಕರಾವಳಿ ಪಡೆಯ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿತ್ತು.
ಅವಧಿಗೆ ಮುನ್ನ 56,000 ಕೋಟಿ ಸಾಲ ತೀರಿಸಿದ ಎನ್‌ಎಚ್‌ಎಐ
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು 2025ರ ಹಣಕಾಸು ವರ್ಷದಲ್ಲಿ 56,000 ಕೋಟಿ ಸಾಲವನ್ನು ಅವಧಿಗೂ ಮೊದಲೇ ತೀರಿಸಿದ್ದು, ಈ ಮೂಲಕ ಬಡ್ಡಿ ರೂಪದಲ್ಲಿ ಪಾವತಿಸಬೇಕಿದ್ದ 1200 ಕೋಟಿ ರು. ಉಳಿಸಿದೆ.ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಎನ್ಎಚ್‌ಎಐನ ಒಟ್ಟು ಸಾಲ 3.35 ಲಕ್ಷ ಕೋಟಿ ಆಗಿತ್ತು.
ವಿತ್ತೀಯ ವರ್ಷದ ಕೊನೇ ತ್ರೈಮಾಸಿಕದಲ್ಲಿ ಇದು 2.76 ಲಕ್ಷ ಕೋಟಿಗೆ ತಲುಪಿದೆ. ಐಎನ್‌ವಿಐಟ್ (InvIT- ಇನ್ಫಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್) ನ ನಗದೀಕರಣದ ಮೂಲಕ ಸುಮಾರು 15,700 ಕೋಟಿಯನ್ನು ಸಾಲಕ್ಕೆ ಪಾವತಿಸಲಾಯಿತು. ಉಳಿದ 40 ಸಾವಿರ ಕೋಟಿಯನ್ನು ರಾಷ್ಟ್ರೀಯ ಸಣ್ಣ ಉಳಿತಾಯ ಫಂಡ್(30 ಸಾವಿರ ಕೋಟಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(10 ಸಾವಿರ)ದ ಸಾಲ ಅವಧಿಪೂರ್ವ ತೀರಿಸಲು ಬಳಸಲಾಯಿತು. ಯಾಕೆಂದರೆ ಇವರೆಡೂ ಸಂಸ್ಥೆಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನನ್ನ ಬಗ್ಗೆ ಅಶ್ಲೀಲ ಟೀಕೆ, ಚಾರಿತ್ರ್ಯ ವಧೆ: ನಟಿ ರೋಸ್ ಅಳಲು
ತಿರುವನಂತಪುರಂ: ವ್ಯಕ್ತಿಯೊಬ್ಬ ತಮ್ಮನ್ನು ಬಹುದಿನಗಳಿಂದ ಹಿಂಬಾಲಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಟೀಕೆಗಳನ್ನು ಮಾಡಿ ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ ಎಂದು ಮಲಯಾಳಂ ನಟಿ ಹನಿ ರೋಸ್ ಆರೋಪಿಸಿದ್ದಾರೆ.
ಈ ಕುರಿತು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರೋಸ್, ‘ಮಹಿಳೆಯೊಬ್ಬಳ ಬಳಿ ಇರುವ ಸಂಪತ್ತಿನ ಆಧಾರದಲ್ಲಿ ಆಕೆಯನ್ನು ಅವಮಾನಿಸುವುದು ಸರಿಯೇ? ಒಬ್ಬಾತ ನನ್ನನ್ನು ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದ. ಆ ಬಳಿಕ ಅವನು ನೀಡುತ್ತಿದ್ದ ಆಮಂತ್ರಣಗಳನ್ನು ನಾನು ನಿರಾಕರಿಸತೊಡಗಿದ್ದರಿಂದ, ಪ್ರತೀಕಾರವಾಗಿ ಆತ ನನ್ನನ್ನು ಅವಮಾನಿಸತೊಡಗಿದ. ನಾನು ಭಾಗವಹಿಸುವ ಕಾರ್ಯಕ್ರಮಗಳಿಗೆಲ್ಲಾ ಬಂದು ನನ್ನ ಗೌರವಕ್ಕೆ ಧಕ್ಕೆ ತರುವಂತೆ ಮಾಧ್ಯಮಗಳಲ್ಲಿ ಕಮೆಂಟ್ ಮಾಡುತ್ತಿದ್ದ’ ಎಂದು ಆರೋಪಿಸಿದ್ದಾರೆ. ಆದರೆ ಆತನ ಗುರುತನ್ನು ಬಹಿರಂಗಪಡಿಸಿಲ್ಲ.
ಇಂತಹ ಕೃತ್ಯಗಳ ವಿರುದ್ಧ ಕಾನೂನು ರಕ್ಷಣೆ ಇಲ್ಲವೇ ಎಂದು ಪ್ರಶ್ನಿಸಿರುವ ನಟಿ, ಮಹಿಳೆಯರನ್ನು ಹಿಂಬಾಲಿಸಿ ಅಶ್ಲೀಲವಾಗಿ ಟೀಕಿಸುವುದು ಅಪರಾಧ ಎಂದಿದ್ದಾರೆ. ‘ಇಷ್ಟು ದಿನ ತಿರಸ್ಕಾರ ಹಾಗೂ ಸಹಾನುಭೂತಿಯಿಂದ ಇವುಗಳನ್ನೆಲ್ಲಾ ನಿರ್ಲಕ್ಷಿಸುತ್ತಿದ್ದೆ. ಇದರರ್ಥ ತಕ್ಕ ಉತ್ತರ ನೀಡಲು ಸಾಧ್ಯವಿಲ್ಲ ಎಂದಲ್ಲ’ ಎಂದು ಗುಡುಗಿದ್ದಾರೆ.
₹960 ಕೋಟಿ ಮೌಲ್ಯದ 2.68 ಲಕ್ಷ ಷೇರು ದಾನ ಮಾಡಿದ ಮಸ್ಕ್!
ವಾಷಿಂಗ್ಟನ್: ಜಗತ್ತಿನ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅವರು 112 ಮಿಲಿಯನ್ ಡಾಲರ್ (960 ಕೋಟಿ ರು.) ಮೌಲ್ಯದ ಟೆಸ್ಲಾ ಕಂಪನಿಯ 2.68 ಲಕ್ಷ ಷೇರುಗಳನ್ನು ದಾನ ಮಾಡಿದ್ದಾರೆ.ಇಷ್ಟು ದಾನ ಮಾಡಿದ ಮೇಲೂ ಮಸ್ಕ್ ಬಳಿ ಟೆಸ್ಲಾ ಕಂಪನಿಯ 411 ಮಿಲಿಯನ್ (41.1 ಕೋಟಿ ಷೇರು) ಷೇರುಗಳು ಉಳಿದುಕೊಂಡಿವೆ. ಎಲಾನ್ ಮಸ್ಕ್ 415 ಬಿಲಿಯನ್ ಡಾಲರ್ (35 ದಶಲಕ್ಷ ಕೋಟಿ ರು.) ಆಸ್ತಿ ಒಡೆಯರಾಗಿದ್ದಾರೆ.
ಪ್ರತಿ ವರ್ಷದ ಕೊನೆಯಲ್ಲಿ ತೆರಿಗೆ ಯೋಜನೆ ಮತ್ತು ದಾನ ನೀಡುವ ಭಾಗವಾಗಿ ಇಷ್ಟು ಮೊತ್ತವನ್ನು ಮಸ್ಕ್ ದಾನ ಮಾಡಿದ್ದು, ಇದರಲ್ಲಿ ಯಾವುದೇ ನಿಖರ ಉದ್ದೇಶವಿಲ್ಲ. ಇದೇ ರೀತಿ 2022ರಲ್ಲಿ 1.95 ಬಿಲಿಯನ್ ಡಾಲರ್ (16,575 ಕೋಟಿ ರು.) ಮೌಲ್ಯದ ಷೇರುಗಳನ್ನು ಮತ್ತು 2021ರಲ್ಲಿ 5.7 (48,450 ಕೋಟಿ ರು.) ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದಾನ ಮಾಡಿದ್ದರು.
ಅಪಹರಣಗೊಂಡಿದ್ದ ಕಂದಹಾರ್ ವಿಮಾನ ಪೈಲಟ್ ನಿವೃತ್ತಿ
ನವದೆಹಲಿ: 1999ರಲ್ಲಿ ತಾಲಿಬಾನ್ ಉಗ್ರರಿಂದ ಅಪಹರಣಗೊಂಡಿದ್ದ ಏರ್ ಇಂಡಿಯಾ ವಿಮಾನ ಐಸಿ 814ರ ಕಮಾಂಡರ್ ಆಗಿದ್ದ ಕ್ಯಾಪ್ಟನ್ ದೇವಿ ಶರಣ್ ಶನಿವಾರ ನಿವೃತ್ತರಾದರು. ಕಾಠ್ಮಂಡುವಿನಿಂದ ದಿಲ್ಲಿಗೆ ಹೊರಟ ವಿಮಾನವನ್ನು ಉಗ್ರರು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್‌ಗೆ ಒಯ್ದಿದ್ದರು. ಬಂಧಿತ ಉಗ್ರ ಮೌಲಾನಾ ಮಸೂದ್ ಅಜರ್ ಬಿಡುಗಡೆ ಬಳಿಕ ವಿಮಾನವನ್ನು ಬಿಟ್ಟುಕೊಟ್ಟಿದ್ದರು.