ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2026-27ನೇ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದು ಈ ವರ್ಷ ಜು.1ರಿಂದಲೇ ಜಾರಿಗೆ ಬರಲಿದೆ. 10ನೇ ಕ್ಲಾಸ್‌ಗೆ ಮುಂದಿನ ವರ್ಷ ಜಾರಿಯಾಗಲಿದೆ.

 ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2026-27ನೇ ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದು ಈ ವರ್ಷ ಜು.1ರಿಂದಲೇ ಜಾರಿಗೆ ಬರಲಿದೆ. 10ನೇ ಕ್ಲಾಸ್‌ಗೆ ಮುಂದಿನ ವರ್ಷ ಜಾರಿಯಾಗಲಿದೆ.

9 ಮತ್ತು 10ನೇ ತರಗತಿಗಳಲ್ಲಿ ಆರ್‌1, ಆರ್‌2, ಆರ್‌3 ಎಂಬ 3 ಭಾಷೆಗಳು ಕಡ್ಡಾಯ. ಇವುಗಳಲ್ಲಿ ಕನಿಷ್ಠ 2 ಭಾಷೆಗಳು ಸ್ಥಳೀಯ ಭಾಷೆಗಳಾಗಿರಬೇಕು. ವಿದೇಶಿ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ, ಅದನ್ನು 3ನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅಥವಾ ಮೂರೂ ಸ್ಥಳೀಯ ಭಾಷೆಗಳನ್ನು ಆಯ್ದುಕೊಂಡರೆ, ವಿದೇಶಿ ಭಾಷೆಯನ್ನು 4ನೇ ಭಾಷೆಯಾಗಿ ಆಯ್ದುಕೊಳ್ಳಬಹುದು. 10ನೇ ತರಗತಿಯಲ್ಲಿ ಆರ್‌3ಗೆ ಬೋರ್ಡ್ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸದ್ಯಕ್ಕೆ 6ನೇ ಕ್ಲಾಸ್‌ ಪಠ್ಯ ಬಳಸಿ:

ಆರ್‌3 ಮೌಲ್ಯಮಾಪನವನ್ನು ಸಂಪೂರ್ಣವಾಗಿ ಶಾಲಾ ಮಟ್ಟದಲ್ಲಿ ಆಂತರಿಕವಾಗಿ ನಡೆಸಲಾಗುವುದು. ಆರ್‌-3ನಲ್ಲಿ ವಿದ್ಯಾರ್ಥಿ ತೋರಿದ ಸಾಮರ್ಥ್ಯವನ್ನು ಸಿಬಿಎಸ್‌ಇ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವುದು. ಆರ್‌3 ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿ 10ನೇ ತರಗತಿ ಬೋರ್ಡ್‌ ಪರೀಕ್ಷೆಗೆ ಕೂರದಂತೆ ಮಾಡಲಾಗುವುದಿಲ್ಲ.

9ನೇ ತರಗತಿಯ ಆರ್‌3 ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ 6ನೇ ತರಗತಿಯ ಆರ್‌3 ಪುಸ್ತಕವನ್ನು ಬಳಸಿಕೊಳ್ಳಬಹುದು. ಜು.1ರ ಒಳಗೆ 19 ಭಾಷೆಗಳಲ್ಲಿ 6ನೇ ತರಗತಿ ಆರ್‌3 ಪಠ್ಯಪುಸ್ತಕಗಳು ಶಾಲೆಗಳಿಗೆ ಲಭ್ಯವಾಗಲಿವೆ. ಈ ಕುರಿತ ಮಾರ್ಗದರ್ಶಿ ಪಠ್ಯವನ್ನು ಜೂ.15ಕ್ಕೆ ಒದಗಿಸಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.

ಸ್ಥಳೀಯ ಭಾರತೀಯ ಭಾಷೆಗಳನ್ನು ಕಲಿಸಬಲ್ಲ ಶಿಕ್ಷಕರ ಅಭಾವವನ್ನು ಮನಗಂಡಿರುವ ಸಿಬಿಎಸ್‌ಇ, ಬೇರೆ ಭಾಷೆಗಳ ಶಿಕ್ಷಕರೇ ಈ ಭಾಷೆಗಳನ್ನು ಕಲಿಸುವ ಸಾಮರ್ಥ್ಯ ಹೊಂದಿದ್ದರೆ, ಅವರನ್ನೇ ಬಳಸಿಕೊಳ್ಳುವಂತೆ ಶಾಲೆಗಳಿಗೆ ಸೂಚಿಸಿದೆ. ಪರಸ್ಪರ ಶಾಲೆಗಳ ಸಹಕಾರ, ಶಿಕ್ಷಕರ ವಿನಿಮಯ ಮತ್ತು ನಿವೃತ್ತ ಶಿಕ್ಷಕರಿಂದ ಸೇವೆ ಪಡೆಯುವಂತೆಯೂ ನಿರ್ದೇಶಿಸಿದೆ.

- ಈ ವರ್ಷ 9ನೇ ಕ್ಲಾಸ್‌ ವಿದ್ಯಾರ್ಥಿಗಳಿಗೆ ಆರ್‌1, ಆರ್‌2, ಆರ್‌3 ಎಂಬ 3 ಭಾಷಾ ವಿಷಯ

- 3ರಲ್ಲಿ 2 ಸ್ಥಳೀಯ ಭಾಷೆ ಕಡ್ಡಾಯ. ಮೂರೂ ಸ್ಥಳೀಯವಾದ್ರೆ 4ನೇ ಭಾಷೆ ಆಯ್ಕೆಗೆ ಅವಕಾಶ

- 4ನೇ ಭಾಷೆ ವಿದೇಶಿ ಭಾಷೆ ಆಗಿರಬೇಕು. 10ನೇ ಕ್ಲಾಸ್‌ಗೆ ಆರ್‌3ಗೆ ಪರೀಕ್ಷೆ ಇರುವುದಿಲ್ಲ

- 9ನೇ ಕ್ಲಾಸ್‌ನ ಆರ್‌3 ಪಠ್ಯಪುಸ್ತಕ ಲಭ್ಯವಾಗುವವರೆಗೆ 6ನೇ ಕ್ಲಾಸ್‌ನ ಆರ್‌3 ಪುಸ್ತಕ ಬಳಕೆ

- ಜು.1ರ ಒಳಗೆ 19 ಭಾಷೆಗಳಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮ