ಭಾರತದಲ್ಲಿ ಟಿ.ಬಿ. 18% ಇಳಿಕೆ : ಮುಕ್ತ ಆಗುವತ್ತ ಹೆಜ್ಜೆ - ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

| Published : Nov 04 2024, 12:21 AM IST / Updated: Nov 04 2024, 06:00 AM IST

ಸಾರಾಂಶ

ಭಾರತದಲ್ಲಿ ಟ್ಯುಬರ್‌ಕ್ಯುಲೋಸಿಸ್‌ (ಟಿ.ಬಿ./ ಕ್ಷಯರೋಗ) ರೋಗ ಶೇ.18ರಷ್ಟು ಇಳಿಕೆಯಾಗಿದ್ದು, ದೇಶವು ಟಿ.ಬಿ. ಮುಕ್ತ ಆಗುವತ್ತ ಹೆಜ್ಜೆಯಿಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶ್ಲಾಘಿಸಿದೆ.

ನವದೆಹಲಿ: ಭಾರತದಲ್ಲಿ ಟ್ಯುಬರ್‌ಕ್ಯುಲೋಸಿಸ್‌ (ಟಿ.ಬಿ./ ಕ್ಷಯರೋಗ) ರೋಗ ಶೇ.18ರಷ್ಟು ಇಳಿಕೆಯಾಗಿದ್ದು, ದೇಶವು ಟಿ.ಬಿ. ಮುಕ್ತ ಆಗುವತ್ತ ಹೆಜ್ಜೆಯಿಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶ್ಲಾಘಿಸಿದೆ.

ಟಿ.ಬಿ. ಇಳಿಕೆಯ ಡಬ್ಲ್ಯುಎಚ್‌ಒ ವರದಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ‘ಒಗ್ಗಟ್ಟಿನಿಂದ ನಾವು ಭಾರತವನ್ನು ಟಿ.ಬಿ. ಮುಕ್ತ ಆಗಿಸುವತ್ತ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಟಿ.ಬಿ. ಸೋಂಕು ಯಾವ ಪ್ರಮಾಣದಲ್ಲಿದೆ ಎಂಬ ಕುರಿತು ಡಬ್ಲ್ಯುಎಚ್‌ಒ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ, ಭಾರತದಲ್ಲಿ 2015ರಿಂದ 2023ರ ನಡುವೆ ಟಿ.ಬಿ. ಪ್ರಕರಣಗಳು ಶೇ.18ರಷ್ಟು ಇಳಿಕೆಯಾಗಿವೆ. 2015ರಲ್ಲಿ ಭಾರತದಲ್ಲಿ ಪ್ರತಿ 1 ಲಕ್ಷ ಜನರಲ್ಲಿ 237 ಜನರಿಗೆ ಟಿ.ಬಿ. ತಗಲುತ್ತಿತ್ತು. 2023ರಲ್ಲಿ ಪ್ರತಿ ಲಕ್ಷ ಜನರಲ್ಲಿ ಅದು 195ಕ್ಕೆ ಇಳಿಕೆಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಟಿ.ಬಿ. ಇಳಿಮುಖವಾಗುತ್ತಿರುವ ವೇಗದ ದುಪ್ಪಟ್ಟಿದೆ. ಜಗತ್ತಿನಲ್ಲಿ ಟಿ.ಬಿ. ಶೇ.8ರ ದರದಲ್ಲಿ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.

ಇನ್ನು, ಭಾರತದಲ್ಲಿ ಟಿ.ಬಿ. ಸೋಂಕಿನಿಂದ ಸಾವನ್ನಪ್ಪುವವರ ದರವೂ ಶೇ.21ರಷ್ಟು ಇಳಿಕೆಯಾಗಿದೆ. ಈ ಹಿಂದೆ ಪ್ರತಿ 1 ಲಕ್ಷ ಜನರಲ್ಲಿ 28 ಜನರು ಟಿ.ಬಿ.ಯಿಂದ ಸಾವನ್ನಪ್ಪುತ್ತಿದ್ದರು. ಈಗ ಅವರ ಸಂಖ್ಯೆ 22ಕ್ಕೆ ಇಳಿಕೆಯಾಗಿದೆ. ಭಾರತದಲ್ಲಿ ಟಿ.ಬಿ. ನಿರ್ಮೂಲನೆಗೆಂದು ಖರ್ಚು ಮಾಡುತ್ತಿರುವ ಹಣ 5.3 ಪಟ್ಟು ಹೆಚ್ಚಾಗಿದೆ. 2015ರಲ್ಲಿ 640 ಕೋಟಿ ರು. ನೀಡಿದ್ದರೆ, 2023ರಲ್ಲಿ 3400 ಕೋಟಿ ರು. ನೀಡಲಾಗಿದೆ ಎಂದೂ ಡಬ್ಲ್ಯುಎಚ್‌ಒ ಶ್ಲಾಘಿಸಿದೆ.

ಮೋದಿ, ನಡ್ಡಾ ಸಂತಸ:

ಟಿ.ಬಿ. ಸೋಂಕು ಇಳಿಕೆಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ‘ಅದ್ಭುತ ಪ್ರಗತಿ! ಟಿ.ಬಿ. ಇಳಿಕೆಗೆ ಭಾರತ ಬದ್ಧತೆಯಿಂದ ಕೆಲಸ ಮಾಡುತ್ತಿರುವುದು ಹಾಗೂ ಹೊಸ ರೀತಿಯ ಉಪಕ್ರಮಗಳನ್ನು ಅಳವಡಿಸಿಕೊಂಡಿರುವುದೇ ಇದಕ್ಕೆ ಕಾರಣ. ಇದೇ ಸ್ಫೂರ್ತಿಯಿಂದ ನಾವು ಟಿ.ಬಿ. ಮುಕ್ತ ಭಾರತಕ್ಕಾಗಿ ಕೆಲಸ ಮಾಡೋಣ’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಕೂಡ ಡಬ್ಲ್ಯುಎಚ್‌ಒ ವರದಿಗೆ ಸಂತಸ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.