ಸಾರಾಂಶ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹುಟ್ಟಿಕೊಂಡಿರುವ ವಕ್ಫ್ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಮಾತನಾಡಿದ್ದಾರೆ. ‘ದೇಶದಲ್ಲಿ ವಕ್ಪ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.
ಬಾಗ್ಮಾರಾ( ಜಾರ್ಖಂಡ್) : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹುಟ್ಟಿಕೊಂಡಿರುವ ವಕ್ಫ್ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಮಾತನಾಡಿದ್ದಾರೆ. ‘ದೇಶದಲ್ಲಿ ವಕ್ಪ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.
ಜಾರ್ಖಂಡ್ ಬಾಗ್ಮಾರಾನಲ್ಲಿ ಚುನಾವಣಾ ರ್‍ಯಾಲಿ ವೇಳೆ ಈ ಕುರಿತು ಮಾತನಾಡಿದ ಶಾ, ‘ವಕ್ಫ್ ಬೋರ್ಡ್ ಭೂಮಿಯನ್ನು ಕಬಳಿಕೆ ಮಾಡುವ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಕರ್ನಾಟಕದಲ್ಲಿ ಹಳ್ಳಿಗರ ಆಸ್ತಿ, ದೇವಾಲಯ, ರೈತರ ಆಸ್ತಿಯನ್ನು ಕಬಳಿಸಿದೆ. ವಕ್ಫ್ ಬೋರ್ಡ್‌ನಲ್ಲಿ ಬದಲಾವಣೆ ತರಬೇಕೇ? ಬೇಡವೇ? ಎಂದು ನನಗೆ ಹೇಳಿ. ಹೇಮಂತ್ ಬಾಬು ಮತ್ತು ರಾಹುಲ್ ಗಾಂಧಿಯವರು ಬೇಡ ಎಂದು ಹೇಳುತ್ತಾರೆ. ಅವರು ವಿರೋಧಿಸಲಿ. ಆದರೆ ಬಿಜೆಪಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಗುಡುಗಿದರು.ಇನ್ನು ಇದೇ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿದ ಶಾ, ‘ಜಾರ್ಖಂಡ್‌ನಲ್ಲಿ ಒಳನುಸುಳುಕೋರರನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಬುಡಕಟ್ಟು ಜನರನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ’ ಎಂದರು.