ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ರೀತಿ ಮಸೀದಿ ನಿರ್ಮಿಸುತ್ತೇನೆ ಎಂದಿದ್ದ ಟಿಎಂಸಿ ಶಾಸಕ ಹುಮಾಯೂನ್ ಕಬೀರ್‌ರನ್ನು ಟಿಎಂಸಿ ಪಕ್ಷದಿಂದ ವಜಾ ಮಾಡಲಾಗಿದೆ.
- ಕೋಮುವಾದ ಸಹಿಸಲ್ಲ: ದೀದಿ । ಹೊಸ ಪಕ್ಷ ಸ್ಥಾಪನೆ: ಹುಮಾಯೂನ್
ಕೋಲ್ಕತಾ/ ಬೆಹ್ರಾಂಪುರ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ರೀತಿ ಮಸೀದಿ ನಿರ್ಮಿಸುತ್ತೇನೆ ಎಂದಿದ್ದ ಟಿಎಂಸಿ ಶಾಸಕ ಹುಮಾಯೂನ್ ಕಬೀರ್‌ರನ್ನು ಟಿಎಂಸಿ ಪಕ್ಷದಿಂದ ವಜಾ ಮಾಡಲಾಗಿದೆ.ಡಿ.6ಕ್ಕೆ ಬಾಬ್ರಿ ಮಸೀದಿ ಧ್ವಂಸ ವರ್ಷಾಚರಣೆ ಹಿನ್ನೆಲೆ ಅಂದೇ ಮಸೀದಿಗೆ ಶಂಕು ಸ್ಥಾಪನೆ ಮಾಡುವುದಾಗಿ ಕಬೀರ್ ಹೇಳಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂತಹ ಹೇಳಿಕೆ ಮುಳುವಾಗಬಹುದು ಎನ್ನುವ ಕಾರಣಕ್ಕೆ ಟಿಎಂಸಿ ಕಬೀರ್‌ರನ್ನು ವಜಾಗೊಳಿಸಿದೆ. ಇತ್ತ ಬಿಜೆಪಿ ‘ಇದೊಂದು ನಾಟಕ’ ಎಂದು ವ್ಯಂಗ್ಯವಾಡಿದೆ. ವಜಾದ ಬಳಿಕ ಮಮತಾ ಈ ಬಗ್ಗೆ ಮಾತನಾಡಿದ್ದು ‘ಟಿಎಂಸಿ ಕೋಮು ರಾಜಕೀಯನ್ನು ಬೆಂಬಲಿಸುವುದಿಲ್ಲ. ಅದನ್ನು ವಿರೋಧಿಸುತ್ತದೆ’ ಎಚ್ಚರಿಸಿದ್ದಾರೆ.
ಹೊಸ ಪಕ್ಷ ಸ್ಥಾಪನೆ:ವಜಾಗೊಳಿಸಿದ್ದಕ್ಕೆ ಅಸಮಾಧಾನಗೊಂಡಿರುವ ಕಬೀರ್ ಹೊಸ ಪಕ್ಷ ಸ್ಥಾಪನೆ ಘೋಷಿಸಿದ್ದಾರೆ. ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿ.22ಕ್ಕೆ ಹೊಸ ಪಕ್ಷ ಸ್ಥಾಪಿಸುತ್ತೇನೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 294 ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಸ್ಪರ್ಧಿಸುವೆ. ಅವರು ಏನಾದರೂ ಮಾಡಿಕೊಳ್ಳಲಿ’ ಎಂದಿದ್ದಾರೆ.