ಸಾರಾಂಶ
ಕೋಲ್ಕತಾ: ಇತ್ತೀಚಿನ ಇಲ್ಲಿನ ಆರ್‌ಜೆ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ರೀತಿ ಖಂಡಿಸಿ ಟಿಎಂಸಿ ಸಂಸದ, ಮಾಜಿ ಐಎಎಸ್ ಅಧಿಕಾರಿ ಜವಾಹರ್ ಸರ್ಕಾರ್, ರಾಜ್ಯಸಭೆ ಸದಸ್ಯತ್ವ ಮತ್ತು ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಪಕ್ಷದ ಅಧ್ಯಕ್ಷೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಭಾನುವಾರ ಪತ್ರ ಬರೆದಿರುವ ಸರ್ಕಾರ್, ‘ವೈದ್ಯೆಯ ಪ್ರಕರಣದಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಅತ್ಯಲ್ಪ ಮತ್ತು ತೀರಾ ವಿಳಂಬವಾದುದು. ಜೊತೆಗೆ ಕೆಲವೊಂದು ನಾಯಕರ ತೋಳ್ಬಲ ಪ್ರದರ್ಶನ ಮತ್ತು ಭ್ರಷ್ಟಾಚಾರದ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಇದು ಪಕ್ಷದ ಬಗ್ಗೆ ನನಗೆ ಭ್ರಮನಿರಸನಕ್ಕೆ ಕಾರಣವಾಗಿದೆ’ ಎಂದಿದ್ದಾರೆ.‘ವೈದ್ಯೆ ಘಟನೆ ಖಂಡಿಸಿ ವೈದ್ಯರು ನಡೆಸಿದ ಪ್ರತಿಭಟನೆ, ಸರ್ಕಾರದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿರುವುದರ ಪ್ರತೀಕ. ನಾನು ಪಕ್ಷ ಸೇರಿದ್ದೇ ಸರ್ವಾಧಿಕಾರ ಆಡಳಿತದ ವಿರುದ್ಧ ಮತ್ತು ಬಿಜೆಪಿಯ ಕೋಮುವಾದದ ವಿರುದ್ಧ ಹೋರಾಡಲು. ಆದರೆ ಅದರಲ್ಲಿ ಒಂದಿಷ್ಟು ಯಶಸ್ಸು ಸಿಕ್ಕಿದ್ದು ಹೊರತುಪಡಿಸಿದರೆ, ಭ್ರಷ್ಟಾಚಾರ ನಿಗ್ರಹದಲ್ಲಿ ಸರ್ಕಾರ ವೈಫಲ್ಯ ಮತ್ತು ಪಕ್ಷದ ಕೆಲ ಹಿರಿಯ ನಾಯಕರ ಶಕ್ತಿ ಪ್ರದರ್ಶನ ನನ್ನನ್ನು ರಾಜೀನಾಮೆಗೆ ಪ್ರೇರೇಪಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಾಗ್ದಾಳಿ:ಈ ನಡುವೆ ಸರ್ಕಾರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಪಕ್ಷದಲ್ಲಿನ ಮಮತಾ ಬ್ಯಾನರ್ಜಿ ಸರ್ವಾಧಿಕಾರ, ಸರ್ಕಾರದಲ್ಲಿನ ಭ್ರಷ್ಟಾಚಾರವನ್ನುಸರ್ಕಾರ್ ರಾಜೀನಾಮೆ ಬಹಿರಂಗಪಡಿಸಿದೆ’ ಎಂದಿದೆ.