ಸಂದೇಶ್‌ಖಾಲಿ ದಾಳಿ ವಿರುದ್ಧ ಆಯೋಗಕ್ಕೆ ಟಿಎಂಸಿ ದೂರು

| Published : Apr 28 2024, 01:15 AM IST / Updated: Apr 28 2024, 05:20 AM IST

ಸಾರಾಂಶ

ಮಹಿಳೆಯರ ಮೇಲಿನ ದೌರ್ಜನ್ಯದಿಂದ ಕುಖ್ಯಾತಿ ಪಡೆದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಶುಕ್ರವಾರ ನಡೆದ ಸಿಬಿಐ ದಾಳಿ ವಿರುದ್ಧ ಚುನಾವಣಾ ಆಯೋಗಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷ ದೂರು ನೀಡಿದೆ.

ಕೋಲ್ಕತಾ: ಮಹಿಳೆಯರ ಮೇಲಿನ ದೌರ್ಜನ್ಯದಿಂದ ಕುಖ್ಯಾತಿ ಪಡೆದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಶುಕ್ರವಾರ ನಡೆದ ಸಿಬಿಐ ದಾಳಿ ವಿರುದ್ಧ ಚುನಾವಣಾ ಆಯೋಗಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷ ದೂರು ನೀಡಿದೆ.

‘ಎರಡನೇ ಹಂತದ ಮತದಾನದ ದಿನವೇ ಟಿಎಂಸಿಯ ಹೆಸರಿಗೆ ಮಸಿ ಬಳಿಯಲು ಸಂದೇಶ್‌ಖಾಲಿಯ ಖಾಲಿ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ವೇಳೆ ಅಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಬಿಐ ಹೇಳಿದೆ. ಆದರೆ ನಮ್ಮ ಹೆಸರು ಕೆಡಿಸಲು ಸಿಬಿಐನವರೇ ಅಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಿರುವ ಸಾಧ್ಯತೆಯಿದೆ. ಅಲ್ಲದೆ, ಈ ದಾಳಿಯಲ್ಲಿ ಸಿಬಿಐ ಜೊತೆ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಕೂಡ ಸೇರಿಕೊಂಡಿರುವುದು ಅನುಮಾನ ಮೂಡಿಸಿದೆ’ ಎಂದು ಟಿಎಂಸಿ ತನ್ನ ಪತ್ರದಲ್ಲಿ ಹೇಳಿದೆ.

‘ದಾಳಿಯಲ್ಲಿ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳನ್ನು ಸೇರಿಸಿಕೊಂಡಿಲ್ಲ. ಖಾಲಿ ಸ್ಥಳಗಳ ಮೇಲೆ ದಾಳಿ ನಡೆಸಿ, ಅಲ್ಲಿ ಅಪಾರ ಶಸ್ತ್ರಾಸ್ತ್ರ ಸಿಕ್ಕಿದೆ ಎಂದು ಸಿಬಿಐ ಹೇಳಿದೆ. ಆಡಳಿತಾರೂಢ ಬಿಜೆಪಿಯು ಚುನಾವಣೆ ಸಮಯದಲ್ಲಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಈಗಾಗಲೇ ನಾವು ದೂರು ನೀಡಿದ್ದರೂ ನೀವು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕೂಡ ಟಿಎಂಸಿ ಆಪಾದಿಸಿದೆ.

ಸಂದೇಶ್‌ಖಾಲಿ ಹಿಂಸಾಚಾರದ ಪ್ರಮುಖ ಆರೋಪಿ, ಟಿಎಂಸಿಯಿಂದ ಅಮಾನತುಗೊಂಡ ನಾಯಕ ಶಾಜಹಾನ್‌ ಶೇಖ್‌ನ ಸಂಬಂಧಿಯ ಮನೆಯ ಮೇಲೆ ಶುಕ್ರವಾರ ಸಿಬಿಐ ದಾಳಿ ನಡೆಸಿ ಗನ್‌, ಬಂದೂಕುಗಳು, ಮದ್ದುಗುಂಡುಗಳು ಹಾಗೂ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿತ್ತು.