ಪರಸ್ಪರರ ಮೇಲೆ ಮಿಥುನ್‌ ಚಕ್ರವರ್ತಿ, ಕುನಾಲ್‌ ಮಾನನಷ್ಟ ಮೊಕದ್ದಮೆ

| Published : Sep 06 2025, 01:00 AM IST

ಪರಸ್ಪರರ ಮೇಲೆ ಮಿಥುನ್‌ ಚಕ್ರವರ್ತಿ, ಕುನಾಲ್‌ ಮಾನನಷ್ಟ ಮೊಕದ್ದಮೆ
Share this Article
  • FB
  • TW
  • Linkdin
  • Email

ಸಾರಾಂಶ

ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರು ಟಿಎಂಸಿ ವಕ್ತಾರ ಕುನಾಲ್ ಘೋಷ್ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ನಲ್ಲಿ 100 ಕೋಟಿ ರು.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಘೋಷ್‌ ಕೂಡ ಮಿಥುನ್‌ ಮೇಲೆ 100 ಕೋಟಿ ರು. ಮಾನಹಾನಿ ನೋಟಿಸ್‌ ನೀಡಿದ್ದಾರೆ.

ಪಿಟಿಐ ಕೋಲ್ಕತಾ

ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರು ಟಿಎಂಸಿ ವಕ್ತಾರ ಕುನಾಲ್ ಘೋಷ್ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ನಲ್ಲಿ 100 ಕೋಟಿ ರು.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಘೋಷ್‌ ಕೂಡ ಮಿಥುನ್‌ ಮೇಲೆ 100 ಕೋಟಿ ರು. ಮಾನಹಾನಿ ನೋಟಿಸ್‌ ನೀಡಿದ್ದಾರೆ.

ಘೋಷ್ ರಾಜಕೀಯ ದ್ವೇಷದಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ನನ್ನ ಮಗ ರೇಪ್‌ ಮಾಡಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ ನಾನು ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಕಾರಣಕ್ಕೆ ತನಿಖೆಯಿಂದ ಪಾರಾಗಲು ಬಿಜೆಪಿ ಸೇರಿದೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಮಿಥುನ್‌ ದೂರಿದ್ದಾರೆ.

ಇದಕ್ಕೆ ಪ್ರತಿಯಾಗಿ ಕುನಾಲ್ ಕೂಡ, ‘ನನ್ನ ಬಗ್ಗೆ ಮಿಥುನ್‌ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ದಾವೆಯ ನೋಟಿಸ್‌ ನೀಡಿದ್ದಾರೆ.

==

‘ಭಾರತ ಛಿದ್ರ ಮಾಡಿ’ ಎಂದಿದ್ದ ಆಸ್ಟ್ರಿಯಾ ಆರ್ಥಿಕ ತಜ್ಞನ ಎಕ್ಸ್‌ ಖಾತೆ ಬ್ಲಾಕ್‌

ಖಲಿಸ್ತಾನಿಗಳ ಪರ ಪೋಸ್ಟ್‌ ಹಾಕಿ ಕಿಡಿಗೇಡಿತನ

ನವದೆಹಲಿ: ‘ಭಾರತವನ್ನು ಛಿದ್ರ ಮಾಡಿ’ ಎಂದು ಕರೆ ನೀಡಿ ಖಲಿಸ್ತಾನಿಗಳ ಪರ ಪೋಸ್ಟ್‌ ಹಾಕಿದ್ದ ಆಸ್ಟ್ರಿಯಾದ ಅರ್ಥಶಾಸ್ತ್ರಜ್ಞ ಗುಂಥರ್ ಫೆಹ್ಲಿಂಗರ್ ಜಾನ್ ಅವರ ಎಕ್ಸ್‌ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.

‘ಭಾರತವನ್ನು ಛಿದ್ರ ಮಾಡಲು ಕರೆ ನೀಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಮನುಷ್ಯನ (ಪುಟಿನ್‌) ಪರ. ನಮಗೆ ಖಲಿಸ್ತಾನಿಗಳ ಸ್ವಾತಂತ್ರ್ಯ ಬಯಸುವ ಮಿತ್ರರ ಬೆಂಬಲ ಬೇಕು’ ಎಂದು ಜಾನ್‌ ಪೋಸ್ಟ್‌ ಮಾಡಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಕೂಡಲೇ ಕಾರ್ಯಪ್ರವೃತ್ತವಾದ ಭಾರತದ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆ ಪೋಸ್ಟ್‌ಅನ್ನು ಫ್ಲ್ಯಾಗ್‌ ಮಾಡಿ, ಜಾನ್‌ರ ಖಾತೆ ಭಾರತದಲ್ಲಿ ಲಭ್ಯವಾಗದಂತೆ ನಿರ್ಬಂಧಿಸಲು ಎಕ್ಸ್‌ಗೆ ಸೂಚಿಸಿದ್ದವು. ಜತೆಗೆ, ‘ಯಾವುದೇ ಅಧಿಕೃತ ಸ್ಥಾನದಲ್ಲಿರದ ಹುಚ್ಚನ ಮಾತಿಗೆ ಗಮನ ಕೊಡುವ ಅಗತ್ಯವಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಉಕ್ರೇನ್, ಕೊಸೊವೊ, ಬೋಸ್ನಿಯಾ ಮತ್ತು ಆಸ್ಟ್ರಿಯಾ ರಾಷ್ಟ್ರಗಳಿಗೆ ನ್ಯಾಟೋ ಸದಸ್ಯತ್ವ ಕೊಡಿಸುವುದರ ಪರ ಇರುವ ಆಸ್ಟ್ರಿಯನ್ ಸಮಿತಿಯ ಅಧ್ಯಕ್ಷರಾಗಿ ಜಾನ್ ಸೇವೆ ಸಲ್ಲಿಸುತ್ತಿದ್ದಾರೆ.

==

ಅನಿಲ್‌ ಅಂಬಾನಿ ವಂಚಕ: ಬ್ಯಾಂಕ್‌ ಆಫ್‌ ಬರೋಡಾ ಘೋಷಣೆ

ಪಿಟಿಐ ನವದೆಹಲಿಸಾಲವನ್ನು ದುರ್ಬಳಕೆ ಮಾಡಿರುವ ಆರೋಪ ಹೊತ್ತಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ(ಆರ್‌ಕಾಂ) ಮಾಜಿ ನಿರ್ದೇಶದ ಅನಿಲ್‌ ಅಂಬಾನಿ ಅವರನ್ನು ‘ವಂಚಕ’ ಎಂದು ಬ್ಯಾಂಕ್‌ ಆಫ್‌ ಬರೋಡಾ ಘೋಷಿಸಿದೆ. ಈ ಮೊದಲು ಎಸ್‌ಬಿಐ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾ ಈ ಕ್ರಮ ಕೈಗೊಂಡಿದ್ದವು.

ಬ್ಯಾಂಕ್‌ ಆಫ್‌ ಬರೋಡಾ ಆರ್‌ಕಾಂಗೆ ಮೊದಲು 1,600 ಕೋಟಿ ರು. ಮತ್ತು ಬಳಿಕ 862.50 ಕೋಟಿ ರು. ಸಾಲ ನೀಡಿತ್ತು. ಆ.28ರ ಹೊತ್ತಿಗೆ, ಒಟ್ಟು ಸಾಲವಾಗಿ ನೀಡಲಾದ 2,462.50 ಕೋಟಿ ರು.ನಲ್ಲಿ 1,656.07 ಕೋಟಿ ರು. ಮೊತ್ತದ ಮರುಪಾವತಿ ಬಾಕಿಯಿತ್ತು. ಇದನ್ನು ಕಾರ್ಯನಿರ್ವಹಿಸದ ಸಾಲ (ಎನ್‌ಪಿಎ) ಎಂದು ಬ್ಯಾಂಕ್‌ 2017ರ ಜೂ.5ರಂದೇ ವರ್ಗೀಕರಿಸಿತ್ತು.ಬ್ಯಾಂಕ್‌ನ ಫೋರೆನ್ಸಿಕ್ ಆಡಿಟ್‌ನಲ್ಲಿ, ಸಾಲವನ್ನು ಪಡೆದ ಉದ್ದೇಶ ಬಿಟ್ಟು ಬೇರೆ ಕಾರ್ಯಕ್ಕೆ ಬಳಸಿರುವುದು ಹಾಗೂ ದಾಖಲೆಗಳನ್ನು ತಿರುಚಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆರ್‌ಕಾಂ ಮತ್ತು ಅನಿಲ್‌ರನ್ನು ವಂಚಕ ಎಂದು ಘೋಷಿಸಲಾಗಿದೆ.

==

ಜಿಯೋ 10ನೇ ವರ್ಷದ ಸಂಭ್ರಮ: ಅನ್‌ಲಿಮಿಟೆಡ್‌ ನೆಟ್‌ ಸೇರಿ ವಿವಿಧ ಆಫರ್‌

ನವದೆಹಲಿ: ರಿಲಯನ್ಸ್‌ ಜಿಯೋ ಸೆ.5ರಂದು 10ನೇ ವರ್ಷಕ್ಕೆ ಕಾಲಿಟ್ಟಿರುವ ಸಂಭ್ರಮದಲ್ಲಿದ್ದು, ಇದರ ಪ್ರಯುಕ್ತ ತನ್ನ 50 ಕೋಟಿ ಗ್ರಾಹಕರಿಗೆ ಅನೇಕ ಆಫರ್‌ಗಳನ್ನು ಘೋಷಿಸಿದೆ.ಜಿಯೋ ಸಿಮ್‌ ಬಳಕೆದಾರರಿಗೆ 3 ಯೋಜನೆಗಳನ್ನು ನೀಡುತ್ತಿರುವುದಾಗಿ ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಘೋಷಿಸಿದ್ದಾರೆ. ಸೆ.5 ಮತ್ತು 7ರ ನಡುವೆ ವಾರಾಂತ್ಯದಲ್ಲಿ ಜಿಯೋ 5 ಜಿ ಬಳಕೆದಾರರಿಗೆ ಅನಿಯಮಿತ ಡೇಟಾ ನೀಡಲಿದೆ. 4ಜಿ ಬಳಕೆದಾರರು 39 ರು. ಮೌಲ್ಯದ ಡೇಟಾ ಆಡ್-ಆನ್ ಮಾಡಿಕೊಳ್ಳುವ ಮೂಲಕ ದಿನಕ್ಕೆ 3-4 ಜಿ ಡೇಟಾ ಪಡೆಯಬಹುದು.ಮತ್ತೊಂದೆಡೆ, 349 ರು.ಗಿಂತ ಅಧಿಕ ರೀಚಾರ್ಜ್‌ ಮಾಡಿಸಿಕೊಂಡಿರುವವರು ಸೆ.5-ಅ.5ರ ನಡುವೆ ಅನಿಯಮಿತ ಡೇಟಾ ಆನಂದಿಸಬಹುದು. ಅಂತೆಯೇ, ಒಂದು ವರ್ಷ ನಿರಂತರ 349 ರು. ರಿಚಾರ್ಜ್‌ ಮಾಡಿಸಿಕೊಂಡವರು 13ನೇ ತಿಂಗಳಿನಲ್ಲಿ ಉಚಿತವಾಗಿ ಅದೇ ಯೋಜನೆಯ ಸೇವೆ ಪಡೆಯಲಿದ್ದಾರೆ.