ಸಾರಾಂಶ
ಚೆನ್ನೈ: ಬೆಂಗಳೂರಿನ ಸಮೀಪದ ಹೊಸೂರಿನಲ್ಲಿ 400 ಕೋಟಿ ರು. ವೆಚ್ಚದಲ್ಲಿ ಐಟಿ ಪಾರ್ಕ್ ನಿರ್ಮಿಸುವುದಾಗಿ ತಮಿಳುನಾಡು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಮೂಲಕ ಐಟಿ ಸಿಟಿ ಬೆಂಗಳೂರಿಗೆ ಇನ್ನೊಂದು ಸಡ್ಡು ಹೊಡೆಯುವ ಯತ್ನವನ್ನು ತಮಿಳುನಾಡು ಮಾಡಿದೆ.
ಹೊಸೂರಿನಲ್ಲಿ 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಉನ್ನತ ದರ್ಜೆಯ ಕಚೇರಿ ಸೌಲಭ್ಯಗಳನ್ನು ಹೊಂದಿರುವ ಟೈಡೆಲ್ ಪಾರ್ಕ್ (ಐಟಿ ಪಾರ್ಕ್) ಅಭಿವೃದ್ಧಿ ಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಜೊತೆಗೆ ಮುಂಬರುವ ವರ್ಷದಲ್ಲಿ ವಿರುಧನಗರದಲ್ಲಿ ಮಿನಿ ಟೈಡೆಲ್ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತದೆ. ಇದರಿಂದ 6600 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಮಿಳುನಾಡು ಹಣಕಾಸು ಸಚಿವ ತಂಗಂ ತೇನಾರಸು ಶುಕ್ರವಾರ ಬಜೆಟ್‌ನಲ್ಲಿ ಹೇಳಿದ್ದಾರೆ.
ಇದಲ್ಲದೆ, ರಾಜ್ಯದ ಇನ್ನೂ ಅನೇಕ ಕಡೆ ಸಣ್ಣ ಪ್ರಮಾಣದ ಐಟಿ ಪಾರ್ಕ್ ಸ್ಥಾಪಿಸುವ ಪ್ರಸ್ತಾಪವನ್ನು ಅವರು ಮಾಡಿದ್ದಾರೆ.
ಕಳೆದ ವರ್ಷ ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಿಸುವುದಾಗಿ ಘೋಷಿಸಿ ಎಂ.ಕೆ. ಸ್ಟಾಲಿನ್ ಸರ್ಕಾರ ಬೆಂಗಳೂರಿಗೆ ಸಡ್ಡು ಹೊಡೆದಿತ್ತು ಎಂಬುದು ಇಲ್ಲಿ ಗಮನಾರ್ಹ.
ಕರ್ನಾಟಕದ ಮಸ್ಕಿಯಲ್ಲಿ ತಮಿಳು ಮೂಲ ಪತ್ತೆಗೆ ಉಖ್ಕನನಕ್ಕೆ ನಿರ್ಧಾರ
ಚೆನ್ನೈ: ಪ್ರಾಚೀನ ತಮಿಳು ಸಂಸ್ಕೃತಿಯು ತಮಿಳುನಾಡು ಮಾತ್ರವಲ್ಲ, ನೆರೆಯ ಕರ್ನಾಟಕದ ಮಸ್ಕಿ, ಆಂಧ್ರಪ್ರದೇಶ ಹಾಗೂ ಒಡಿಶಾಗೂ ವ್ಯಾಪಿಸಿತ್ತು ಎಂದಿರುವ ತಮಿಳುನಾಡು ಸರ್ಕಾರ, ತನ್ನ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ಈ ರಾಜ್ಯಗಳಲ್ಲೂ ತನ್ನ ಸಂಸ್ಕೃತಿಯನ್ನು ಅನ್ವೇಷಿಸುವ ಪ್ರಯತ್ನ ನಡೆಸಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಿದೆ. ಈ ಪ್ರದೇಶಗಳಲ್ಲಿ ಉಖ್ಕನನದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.