ಹಿಟ್‌ ಆ್ಯಂಡ್‌ ರನ್‌ಗೆ 10 ವರ್ಷ ಜೈಲು: ಲಾರಿ ಚಾಲಕರ ಪ್ರತಿಭಟನೆ

| Published : Jan 02 2024, 02:15 AM IST

ಹಿಟ್‌ ಆ್ಯಂಡ್‌ ರನ್‌ಗೆ 10 ವರ್ಷ ಜೈಲು: ಲಾರಿ ಚಾಲಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಅಪರಾಧ ಕಾಯ್ದೆಯಲ್ಲಿ ಹಿಟ್‌ ಅಂಡ್‌ ರನ್‌ ಪ್ರಕರಣಕ್ಕೆ ಶಿಕ್ಷೆಯನ್ನು 2 ರಿಂದ 10 ವರ್ಷಕ್ಕೆ ಹೆಚ್ಚಿಸಿರುವುದನ್ನು ಖಂಡಿಸಿ ದೇಶದ ಅನೇಕ ಭಾಗಗಳಲ್ಲಿ ಬೀದಿಗಿಳಿದ ಟ್ರಕ್‌ ಚಾಲಕರು, ಭಾರೀ ಪ್ರತಿಭಟನೆ ನಡೆಸಿದರು.

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಉಭಯ ಸದನಗಳಲ್ಲಿ ಅನುಮೋದನೆ ನೀಡಿರುವ ಬ್ರಿಟಿಷ್‌ ಕಾಲದ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರುವ ಮೂರು ನೂತನ ನ್ಯಾಯ ಸಂಹಿತೆಗಳ ವಿರುದ್ಧ ಈಗ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಟ್‌ ಆ್ಯಂಡ್‌ ರನ್‌ ಅಪರಾಧ ಪ್ರಕರಣಗಳಲ್ಲಿ ಹಾಲಿ ಇದ್ದ 2 ವರ್ಷ ಜೈಲು ಶಿಕ್ಷೆಯನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದರ ವಿರುದ್ಧ ದೇಶಾದ್ಯಂತ ಟ್ರಕ್‌ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ನಡೆದಿವೆ,

ಹರಿಯಾಣದ ಜಿಂದ್‌ನಲ್ಲಿ ಮಾತನಾಡಿದ ಪ್ರತಿಭಟನಾನಿರತ ಚಾಲಕರು, ‘ಹೊಸ ಕಾನೂನಿನ ಶಿಕ್ಷೆಯ ಪ್ರಮಾಣವು ಚಾಲನಾ ವೃತ್ತಿ ಕೈಗೊಳ್ಳಲು ಇಚ್ಛಿಸುವವರನ್ನು ವೃತ್ತಿಯಿಂದಲೇ ವಿಮುಖರನ್ನಾಗಿಸುತ್ತದೆ. ಹೀಗಾಗಿ ಈ ಕಾನೂನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು. ಪ. ಬಂಗಾಳದ ಹೂಗ್ಲಿಯಲ್ಲಿ ಟ್ರಕ್‌ ಚಾಲಕರು ರಾ.ಹೆ.2 ಅನ್ನು ಬಂದ್‌ ಮಾಡಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಯಾವುದೇ ವ್ಯಕ್ತಿಗೆ ವಾಹನ ಗುದ್ದಿ ಪರಾರಿಯಾಗುವ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆಯನ್ನು ನೂತನ ನ್ಯಾಯ ಸಂಹಿತೆಯು ನೀಡುತ್ತದೆ. ಈ ಹಿಂದಿನ ಐಪಿಸಿ ಕಾನೂನು ಪ್ರಕಾರ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಸೆಕ್ಷನ್‌ 304ಎ ಅಡಿ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ಮಾತ್ರ ವಿಧಿಸಲಾಗುತ್ತಿತ್ತು.ಇಂಡಿಯನ್‌ ಪೀನಲ್‌ ಕೋಡ್‌ (ಐಪಿಸಿ) ಅಪರಾಧ ಕಾನೂನುಗಳ ಬದಲಿಗೆ ಭಾರತೀಯ ನ್ಯಾಯ ಸಂಹಿತೆ, 2023 ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದಿಸಿತ್ತು.