ಇಲ್ಲಿನ ಶೀತಲಾ ಮಾತಾ ದೇವಸ್ಥಾನದ ಬಳಿ ಭಕ್ತಸಮೂಹದ ಮೇಲೆ ಟ್ರಕ್‌ ಒಂದು ನುಗ್ಗಿದ ಪರಿಣಾಮ 14 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ತಡರಾತ್ರಿ 1.30ರ ಹೊತ್ತಿಗೆ ನಡೆದಿದೆ.. ಟ್ರಕ್‌ಗೆ ಸಿಲುಕಿ ಗಾಯಗೊಂಡ 28 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪೈಕಿ ನಾಲ್ಕು ಜನರ ಸ್ಥಿತಿ ಗಂಭೀರ

ಗ್ವಾಲಿಯರ್‌ (ಮ.ಪ್ರ.) : ಇಲ್ಲಿನ ಶೀತಲಾ ಮಾತಾ ದೇವಸ್ಥಾನದ ಬಳಿ ಭಕ್ತಸಮೂಹದ ಮೇಲೆ ಟ್ರಕ್‌ ಒಂದು ನುಗ್ಗಿದ ಪರಿಣಾಮ 14 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ತಡರಾತ್ರಿ 1.30ರ ಹೊತ್ತಿಗೆ ನಡೆದಿದೆ. ಟ್ರಕ್‌ಗೆ ಸಿಲುಕಿ ಗಾಯಗೊಂಡ 28 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪೈಕಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಮೃತರ ಪರಿವಾರಗಳಿಗೆ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಇದರ ಜತೆಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರು. ಪರಿಹಾರ ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ದಸರೆ ಕಾರಣ ಭಕ್ತಸಂದಣಿ ಹೆಚ್ಚಿದ್ದ ಕಾರಣ ದೇಗುಲ ಸುತ್ತ ‘ವಾಹನ ನಿರ್ಬಂಧ ವಲಯ’ (ನೋ ಎಂಟ್ರಿ) ಇತ್ತು. ಆದರೂ ಅಲ್ಲಿ ಟ್ರಕ್‌ ಬಂದಿದೆ. ಟ್ರಕ್‌ನ ಬ್ರೇಕ್‌ ನಡುರಸ್ತೆಯಲ್ಲಿ ಫೇಲ್‌ ಆಗಿದ್ದು, ವಾಹನವನ್ನು ನಿಯಂತ್ರಿಸಿ ನಿಲ್ಲಿಸಲೆಂದು ಚಾಲಕ ಎಡಗಡೆ ತಿರುಗಿಸಿದ ಪರಿಣಾಮ ದೇವಸ್ಥಾನದ ಗೋಡೆಗೆ ಗುದ್ದಿದೆ ಹಾಗೂ ಭಕ್ತರ ಮೇಲೆ ಹರಿದಿದೆ.

ಟ್ರಕ್‌ ಗೇಟ್‌ಗೆ ಗುದ್ದಿದ ಪರಿಣಾಮ ದೇಗುಲದ ಗೋಡೆ ಕುಸಿದಿದೆ

‘ಒಂದೊಮ್ಮೆ ಟ್ರಕ್‌ ನೇರವಾಗಿ ನಡುರಸ್ತೆಯಲ್ಲಿ ಮುಂದುವರಿದಿದ್ದರೆ ಕನಿಷ್ಠ 600ರಿಂದ 700 ಮಂದಿಯ ಮಾರಣಹೋಮವೇ ಆಗುತ್ತಿತ್ತು’ ಎಂದು ತನಿಖಾದಿಕಾರಿಗಳು ತಿಳಿಸಿದ್ದಾರೆ. ಅತ್ತ ರಸ್ತೆ ಬದಿಯ ಅಂಗಡಿಗಳ ಮೇಲೆರಗಿ ಬಂದ ಟ್ರಕ್‌ ಗೇಟ್‌ಗೆ ಗುದ್ದಿದ ಪರಿಣಾಮ ದೇಗುಲದ ಗೋಡೆ ಕುಸಿದಿದೆ.

9 ಪೊಲೀಸರ ವಿರುದ್ಧ ಕ್ರಮ:

ಪಂಜಾಬ್‌ ನೋಂದಣಿಯ ಟ್ರಕ್‌, ‘ವಾಹನ ನಿರ್ಬಂಧಿತ ಪ್ರದೇಶ’ಕ್ಕೆ ನುಗ್ಗಿದ್ದೇ ದುರ್ಘಟನೆಗೆ ಕಾರಣ ಎಂದಿರುವ ಮುಖ್ಯಮಂತ್ರಿ ಮೋಹನ್‌ ಯಾದವ್‌, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧೀಕ್ಷಕರ ಎತ್ತಂಗಡಿ ಮಾಡಿದ್ದಾರೆ ಹಾಗೂ 8 ಪೇದೆಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಜತೆಗೆ, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.